Breaking News

ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ ಮಗನನ್ನುಕೊಲೆ ಮಾಡಿಸಿರುವ ತಂದೆ ಪೊಲೀಸ್ ವರಿಷ್ಠಾಧಿಕಾರಿ ಸುದ್ದಿಗೋಷ್ಠಿ

Spread the love

ಬೆಳಗಾವಿ : ಕುಡಿದು ಬಂದು ಮನೆಯಲ್ಲಿ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿಸಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸಂಗಮೇಶ ಮಾರುತಿ ತಿಗಡಿ (35) ಕೊಲೆಯಾದವ. ಯರಗಟ್ಟಿ ತಾಲೂಕಿನ ಹಿರೇಕೊಪ್ಪ ಗ್ರಾಮದ ಮಂಜುನಾಥ ಶೇಖಪ್ಪ ಹೊಂಗಲ (43) ಮತ್ತು ಅಡಿವೆಪ್ಪ ಅಜ್ಜಪ್ಪ ಬೊಳತ್ತಿನ (38) ಬಂಧಿತು ಆರೋಪಿಗಳು.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ, “ಆಗಸ್ಟ್ 20ರಂದು ಬೆಳಿಗ್ಗೆ 11 ಗಂಟೆಗೆ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಯರಗಟ್ಟಿ ತಾಲೂಕಿನ ಕುಟರನಟ್ಟಿ ಗ್ರಾಮದಲ್ಲಿ ಸಂಗಮೇಶ ಶವ ಪತ್ತೆಯಾಗಿತ್ತು. ಈ ಬಗ್ಗೆ ಸಂಗಮೇಶ ಸಹೋದರ ಮಹೇಶ ತಿಗಡಿ ಮುರಗೋಡ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಡಿಎಸ್ಪಿ ರಾಮನಗೌಡ ಹಟ್ಟಿ ನೇತೃತ್ವದ ತಂಡ ಪ್ರಕರಣ ಬೇಧಿಸಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಸಂಗಮೇಶನ ತಂದೆ ಮಾರುತಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ ತನಿಖೆ ಕೈಗೊಂಡಿದ್ದೇವೆ” ಎಂದು ತಿಳಿಸಿದರು.

ಮದ್ಯ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ: ಸಂಗಮೇಶ ಮತ್ತು ಆರೋಪಿ ಮಂಜುನಾಥ ಇಬ್ಬರು ಈರುಳ್ಳಿ ವ್ಯಾಪಾರ ಮಾಡುತ್ತಿದ್ದರು. ಸಂಗಮೇಶನ ಕುಡಿತದಿಂದ ಮನೆಯವರಿಗೆ ಸಾಕುಸಾಕಾಗಿ ಹೋಗಿತ್ತು. ಎಷ್ಟೇ ಬುದ್ಧಿ ಹೇಳಿದರೂ ಸಂಗಮೇಶ ಬದಲಾಗುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಹೀಗೆಯೇ ಬಿಟ್ಟರೆ ಇವನಿಂದ ಮನೆಯವರಿಗೆಲ್ಲ ನೆಮ್ಮದಿ ಇರಲ್ಲ ಎಂದುಕೊಂಡ ತಂದೆ ಮಾರುತಿ ತಿಗಡಿ ಸ್ವಂತ ಮಗನನ್ನೇ ಕೊಲೆ ಮಾಡಿಸುವ ನಿರ್ಧಾರಕ್ಕೆ ಬರುತ್ತಾರೆ. ಕೊಲೆ ಮಾಡಿಸಲು ತಂದೆ ಆಯ್ಕೆ ಮಾಡಿದ್ದು ಮಗನ ಜೊತೆಗೆ ಉಳ್ಳಾಗಡ್ಡಿ ವ್ಯಾಪಾರ ಮಾಡುತ್ತಿದ್ದ ಮಂಜುನಾಥ ಹೊಂಗಲ ಎಂಬಾತನನ್ನು. ಅದರಂತೆ, ಆಗಸ್ಟ್ 19ರಂದು ಗೋಕಾಕ್ ತಾಲೂಕಿನ ಅಂಕಲಗಿಯಲ್ಲಿ ಸಂಗಮೇಶನಿಗೆ ಮಂಜುನಾಥ ಕಂಠಪೂರ್ತಿ ಕುಡಿಸಿದ್ದಾನೆ. ಬಳಿಕ ಬೈಕ್ ಮೇಲೆ ಕುಟರನಟ್ಟಿ ಬಳಿ ಆತನನ್ನು ಕರೆದುಕೊಂಡು ಬಂದು ರಸ್ತೆ ಪಕ್ಕದಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಮಂಜುನಾಥನಿಗೆ ಇನ್ನೋರ್ವ ಆರೋಪಿ ಅಡಿವೆಪ್ಪ ಬೊಳತ್ತಿನ ಕೂಡ ಸಾಥ್ ಕೊಟ್ಟಿದ್ದಾನೆ. ನಂತರ ಇಬ್ಬರು ಆರೋಪಿಗಳು ಶವ ಬಿಸಾಕಿ ಪರಾರಿಯಾಗಿದ್ದರು ಎಂದು ಡಾ.ಸಂಜೀವ ಪಾಟೀಲ ಮಾಹಿತಿ ನೀಡಿದ್ದಾರೆ.

ಆರೋಪಿಗಳ ಸುಳಿವು ಕೊಟ್ಟ ಸುಣ್ಣದ ಡಬ್ಬಿ : ಸುದ್ದಿ ತಿಳಿಯುತ್ತಿದ್ದಂತೆ ಕೊಲೆಯಾದ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾಗ ಸಂಗಮೇಶನ ಕಿಸೆಯಲ್ಲಿ ಒಂದು ಸುಣ್ಣದ ಡಬ್ಬಿ ಪತ್ತೆಯಾಗಿತ್ತು. ಆ ಸುಣ್ಣದ ಡಬ್ಬಿಯಲ್ಲಿ ಸವದತ್ತಿಯಲ್ಲಿ ತಪಾಸಣೆ ಮಾಡಿಸಿದ್ದ ಶಿಬಿರದ ಚೀಟಿಯಲ್ಲಿ ಆರೋಪಿ ಮಂಜುನಾಥನ ಫೋನ್ ನಂಬರ್ ಬರೆಯಲಾಗಿತ್ತು. ನಂಬರ್ ಪರಿಶೀಲಿಸಿದಾಗ ಮಂಜುನಾಥನ ಬಗ್ಗೆ ತಿಳಿದಿದೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದು ಮುರಗೋಡ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ