ಚಾಮರಾಜನಗರ : ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡಕ್ಕೆ ಅಡಿಪಾಯ ಹಾಕಿದ್ದಾರೆ ಎಂಬ ಪರಿಸರವಾದಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ನಟ ಗಣೇಶ್ ಅವರಿಗೆ ಬಂಡೀಪುರ ಸೂಕ್ಷ್ಮ ವಲಯ ಪರಿಸರ ಸಮಿತಿ ಸದಸ್ಯ ಕಾರ್ಯದರ್ಶಿ ನೊಟೀಸ್ ನೀಡಿದ್ದಾರೆ. ಮುಂದಿನ 7 ದಿನಗಳೊಳಗೆ ಸೂಕ್ತ ದಾಖಲಾತಿ ಒದಗಿಸಬೇಕು. ಅಲ್ಲಿಯವರೆಗೂ ಕಾಮಗಾರಿ ನಿಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಪರಿಸರವಾದಿಗಳ ಆಕ್ಷೇಪ: ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ಜಕ್ಕಳ್ಳಿ ಗ್ರಾಮದ ಸರ್ವೇ ನಂ. 105ರಲ್ಲಿ 1.24 ಎಕರೆ ಜಮೀನು ಖರೀದಿಸಿರುವ ಗಣೇಶ್, ಸ್ವಂತ ವಾಸಕ್ಕೆ ಮನೆ ಹಾಗೂ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಕುರಿತು ಹೇಳಿದ್ದರು. ಅರಣ್ಯ ಅಧಿಕಾರಿಗಳು 2022ರ ಜೂನ್ ತಿಂಗಳಿನಲ್ಲಿ ಈ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡು ಅನುಮತಿ ನೀಡಿದ್ದರು. ಆದರೆ ಈಗ ಆ ಜಾಗದಲ್ಲಿ ಜೆಸಿಬಿ ಮೂಲಕ ದೊಡ್ಡ ಮಟ್ಟದ ಕೆಲಸ ನಡೆಯುತ್ತಿದ್ದಾರೆ ಎನ್ನುವುದು ಪರಿಸರವಾದಿಗಳ ಆಕ್ಷೇಪವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಆ ರೀತಿಯ ಕಟ್ಟಡಕ್ಕೆ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮುಚ್ಚಳಿಕೆ ಪತ್ರ, ಕಂದಾಯ ದಾಖಲಾತಿ ಸೇರಿದಂತೆ ಜಮೀನಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಮುಂದಿನ ಏಳು ದಿನಗಳೊಳಗೆ ಸಲ್ಲಿಸುವಂತೆ ಗಣೇಶ್ ಅವರಿಗೆ ಸೂಚನೆ ನೀಡಿದ್ದಾರೆ.