ಹುಬ್ಬಳ್ಳಿ : ಲಿಂಗಾಯತಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೇವೆ. ಇದೇ ತಿಂಗಳಿನಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಸಮುದಾಯದಲ್ಲಿ ನಿರಾಸೆ ಮೂಡಿದೆ. ಕೂಡಲೇ ತಜ್ಞರ ಸಭೆ ಕರೆದು ಈ ವಿಚಾರವನ್ನು ಇತ್ಯರ್ಥ ಮಾಡಬೇಕು. 2ಎ ಮೀಸಲಾತಿ ಹೈಕೋರ್ಟ್‌ನಲ್ಲಿದೆ, 2ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಬಜೆಟ್ ಅಧಿವೇಶನದ ನಂತರ ಸಭೆ ಕರೆದು ಪರಿಶೀಲನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಆದರೆ ಸಿಎಂ ಯಾವುದೇ ಸಭೆ ಕರೆದಿಲ್ಲ. ಇದರಿಂದ ಸಮಾಜಕ್ಕೆ ನಿರಾಸೆಯಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಷ್ಠಲಿಂಗ ಪೂಜೆ ಮಾಡುವ ಮೂಲಕ ಮತ್ತೆ ಹೋರಾಟ ಆರಂಭಿಸುತ್ತೇವೆ. ಸಮುದಾಯದ ಜನತೆ ಹೋರಾಟಕ್ಕೆ ಅಣಿಯಾಗಿದ್ದಾರೆ. ಮೀಸಲಾತಿಯಲ್ಲಿ ಯಾವುದೇ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ನಮಗೆ ಇನ್ನೂ ಆದೇಶದ ಪ್ರತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಶ್ರಾವಣ ಮಾಸದಲ್ಲಿ ಹೋರಾಟ ನಡೆಸಲು ರೂಪುರೇಷೆ ಆರಂಭಿಸಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.