ಕೊಪ್ಪಳ: ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ.
ಇಂದಿನ ರಾಜಕಾರಣ ನನಗೆ ಒಗ್ಗುವುದಿಲ್ಲ. 12 ಚುನಾವಣೆಗಳನ್ನು ಎದುರಿಸಿದ್ದೇನೆ. ಈಗಿನ ರಾಜಕೀಯ ವ್ಯವಸ್ಥೆ ಸರಿಯಿಲ್ಲ. ಬಹುಶಃ ನನ್ನ ಕೊನೆಯ ಚುನಾವಣೆ ಮುಗಿದಿದೆ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಶ್ರಾವಣ ಸಂಭ್ರಮ ಹೆಸರಿನಲ್ಲಿ ಕೊಪ್ಪಳದಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ಅವರು ಆಯೋಜಿಸಿದ್ದ ಔತಣ ಕೂಟದ ವೇಳೆ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ಭ್ರಷ್ಟಾಚಾರದ ವಿಷಯದಲ್ಲಿ ಕರ್ನಾಟಕ ಬ್ರ್ಯಾಂಡ್ ಆಗುತ್ತಿರುವುದು ನೋವಿನ ಸಂಗತಿ. ಇದು ಒಳ್ಳೆಯ ಬೆಳವಣಿಗೆಯಲ್ಲ. ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕ್ರಮ ವಹಿಸಬೇಕು ಎಂದರು.
ಭ್ರಷ್ಟಾಚಾರದಿಂದ ರಾಜ್ಯಕ್ಕೆ ಕೆಟ್ಟ ಹೆಸರು: ಹಿಂದೆ ಬಿಜೆಪಿ ಸರ್ಕಾರ ಆಡಳಿತವಿದ್ದಾಗ ಗುತ್ತಿಗೆದಾರರು ಶೇ. 40% ಕಮಿಷನ್ ಆರೋಪ ಮಾಡಿದ್ದರು. ಈಗ ಶೇ. 15% ಕಮಿಷನ್ ಎಂದು ಆರೋಪಿಸುತ್ತಿದ್ದಾರೆ. ಆಗ ನಾವು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದೆವು. ಈಗ ಅವರು ನಮ್ಮ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬರುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಭ್ರಷ್ಟಾಚಾರಕ್ಕೆ ಅಂತ್ಯ ಹಾಡಲು ಮುಖ್ಯಮಂತ್ರಿ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ಪಡೆದು ಕ್ರಮ ಕೈಗೊಳ್ಳಬೇಕು. ವಿರೋಧ ಪಕ್ಷದವರೂ ಇದಕ್ಕೆ ಸಹಕಾರ ನೀಡಬೇಕು. ಬಿಜೆಪಿ ಮತ್ತು ಕಾಂಗ್ರೆಸ್ ಯಾರೇ ಭ್ರಷ್ಟಾಚಾರ ಮಾಡಿದರೂ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಚುನಾವಣಾ ಸಮಯದಲ್ಲಿ ನಾಮಪತ್ರ ಸಲ್ಲಿಸಿದ ದಿನದಿಂದಲೇ ಭ್ರಷ್ಟಾಚಾರ ಶುರುವಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಲೋಕಸಭೆಗೆ ಸ್ಪರ್ಧಿಸಲ್ಲ: ಈಗಾಗಲೇ ನಾನು ಈ ಹಿಂದೆ ಸಂಸದನಾಗಿ ಉತ್ತಮ ಕೆಲಸಗಳನ್ನು ಮಾಡಿದ್ದೇನೆ. ರೈಲ್ವೆ, ನವೋದಯ, ಹೆದ್ದಾರಿಗಳಂತ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಆದರೆ, ಅವುಗಳ ಬಗ್ಗೆ ಜನರು ಮಾತನಾಡುತ್ತಿಲ್ಲ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೆ ಜನ ನನ್ನನ್ನು ಗೆಲ್ಲಿಸುವುದಿಲ್ಲ. ಸದ್ಯದ ರಾಜಕೀಯ ಪರಿಸ್ಥಿತಿ ನನಗೆ ಹೊಂದಿಕೆಯಾಗುತ್ತಿಲ್ಲ. ನನಗೆ ಮತ್ತೆ ಯಾವುದೇ ಚುನಾವಣೆಗೆ ಸ್ಪರ್ಧಿಸಲು ಇಚ್ಛೆಇಲ್ಲ ಎಂದು ರಾಯರೆಡ್ಡಿ ಸ್ಪಷ್ಟಪಡಿಸಿದರು.