ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಹಲವಾರು ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, “ನೈಸ್” ವಿವಾದ (Nice controversy) ತಾರಕಕ್ಕೇರಿದೆ. ಬಿಎಂಐಸಿ ಯೋಜನೆಯ ಅವ್ಯವಹಾರದ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಸಲ್ಲಿಸುವುದಾಗಿ ಹೇಳಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ಕೆಂಡವಾಗಿದೆ.
ಅಲ್ಲದೆ, ನೈಸ್ ಸಂಸ್ಥೆ ಜತೆ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಸೇರಿಕೊಂಡಿದ್ದಾರೆ ಎಂಬ ಆರೋಪಕ್ಕೆ ಡಿಕೆಶಿ ಖಡಕ್ ಪ್ರತಿಕ್ರಿಯೆ ನೀಡಿದ್ದು, ಎಚ್‌ಡಿಕೆಗೆ ಸರಿಯಾದ ಉತ್ತರ ಕೊಡುತ್ತೇನೆ ಎಂದು ಗುಡುಗಿದ್ದಾರೆ. ಇನ್ನು ಈ ಸಂಬಂಧ ಕುಮಾರಸ್ವಾಮಿ ಅವರು ದಾಖಲೆ ಕೊಟ್ಟರೆ ಸೂಕ್ತ ತನಿಖೆ ನಡೆಸುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Union Minister Pralhad Joshi) ಹೇಳಿರುವುದು ಇಡೀ ಪ್ರಕರಣಕ್ಕೆ ರಾಜಕೀಯ ಬಣ್ಣ ಸಿಕ್ಕಂತಾಗಿದೆ.
ರಾಜ್ಯದಲ್ಲೀಗ ನೈಸ್ ಸಂಸ್ಥೇಯ (ಬೆಂಗಳೂರು – ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ಆಗಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ಶನಿವಾರ (ಆಗಸ್ಟ್ 5) ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಗುಡುಗಿದ್ದರು. ಬ್ರಾಂಡ್ ಬೆಂಗಳೂರು ಬಗ್ಗೆ ಮಾತನಾಡುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈಗ ಪೆರಿಫೆರಲ್ ರಿಂಗ್ ರೋಡ್ ಮಾಡಲು ನೈಸ್ ಜತೆ ಸೇರಿಕೊಂಡಿದ್ದಾರೆ. ಈ ಮೂಲಕ ಅವರು ಬಡವರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ ಎಂದು ಆರೋಪ ಮಾಡಿದ್ದರು.
ನೈಸ್ ಹಗರಣದ ಬಗ್ಗೆ ಮತ್ತೆ ಪ್ರಸ್ತಾಪಿಸಿದ ಅವರು 13000 ಕೋಟಿ ಮೌಲ್ಯದ ಜಾಗವನ್ನು ಮರಳಿ ಪಡೆಯಬೇಕು. ಅಲ್ಲದೆ, ನೈಸ್ ಹಗರಣದ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಕೊಡಲು ತೀರ್ಮಾನ ಮಾಡಿದ್ದೇನೆ. ಈ ಸಂಬಂಧ ಅವರ ಭೇಟಿಗೆ ಸಮಯ ಕೇಳಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು.