ಧಾರವಾಡ: ವಿದ್ಯಾಕಾಶಿ ಎಂದೇ ಹೆಸರು ಗಳಿಸಿರುವ ಧಾರವಾಡದ ಸರ್ಕಾರಿ ಕಾಲೇಜೊಂದು ಮಳೆ ಬಂದರೆ ಸಾಕು ಎಲ್ಲೆಡೆ ಸೋರುತ್ತಿದ್ದು, ವಿದ್ಯಾರ್ಥಿನಿಯರಿಗೆ ನಿತ್ಯವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ನಗರದ ಆರ್ ಎನ್ ಶೆಟ್ಟಿ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜ್ನ ಸ್ಥಿತಿಯಾಗಿದೆ.
ಈ ಕಾಲೇಜಿನ ಕಟ್ಟಡಗಳು ಸಂಪೂರ್ಣವಾಗಿ ಹಳೆಯದಾಗಿದ್ದು, ಮೇಲ್ಛಾವಣಿ ಸಹ ಬಿರುಕು ಬಿಟ್ಟಿದ್ದು, ಮಳೆ ಬಂದರೇ ಸೋರಲಾರಂಭಿಸುತ್ತದೆ. ಧಾರವಾಡದಲ್ಲಿ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಇದರಿಂದ ಕಾಲೇಜಿನ ಕೊಠಡಿಗಳಿಗೆ ನೀರು ನುಗ್ಗಿದೆ. ಜತೆಗೆ ಮೇಲ್ಛಾವಣಿ ಸೋರುತ್ತಿರುವುದರಿಂದ ವಿದ್ಯಾರ್ಥಿನಿಯರು ಕೊಡೆ ಹಿಡಿದೇ ಪಾಠ ಕೇಳುವುದು ಅನಿವಾರ್ಯವಾಗಿದೆ.
ಈ ಕಾಲೇಜಿನಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಎಫ್ಟಿ, ಗೃಹ ವಿಜ್ಞಾನ ಪದವಿ ಕೋರ್ಸ್ಗಳಿದ್ದು, ಒಟ್ಟು 343 ವಿದ್ಯಾರ್ಥಿನಿಯರಿದ್ದಾರೆ. ಇಲ್ಲಿ ಉತ್ತಮ ಉಪನ್ಯಾಸಕರು ಸಹ ಇದ್ದಾರೆ. ಕಾಲೇಜಿನ ಫಲಿತಾಂಶ ಕೂಡ ಉತ್ತಮವಾಗಿದೆ. ಸರ್ಕಾರಿ ಕಾಲೇಜಿಗೆ ಬರುವ ಎಲ್ಲಾ ವಿದ್ಯಾರ್ಥಿನಿಯರು ಬಡ ಮತ್ತು ಮಧ್ಯಮ ವರ್ಗದವರಾಗಿದ್ದು, ಹೀಗಾಗಿ ಕಾಲೇಜಿಗೆ ನೂತನ ಕಟ್ಟಡ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂಬುದು ವಿದ್ಯಾರ್ಥಿನಿಯರ ಆಗ್ರಹವಾಗಿದೆ.
ಈ ಬಗ್ಗೆ ಕಾಲೇಜು ಪ್ರಾಚಾರ್ಯರಾದ ಡಾ. ಸರಸ್ವತಿ ಕಳಸದ್ ಅವರು ಮಾತನಾಡಿ, 2019ರಲ್ಲಿ ಈ ಕಟ್ಟಡಕ್ಕೆ ಕಾಲೇಜನ್ನು ಸ್ಥಳಾಂತರಿಸಲಾಯಿತು. ಕಾಲೇಜಿನಲ್ಲಿ ಮೂರು ಸೈನ್ಸ್ ವಿಭಾಗಗಳಿರುವುದು ಹೆಮ್ಮೆಯ ವಿಚಾರ. ಆರಂಭದಲ್ಲಿ ಈ ಕಾಲೇಜು 40 ರಿಂದ 50 ಪರ್ಸೆಂಟ್ ದಾಖಲಾತಿ ಮಾತ್ರ ಹೊಂದಿತ್ತು. ಬಳಿಕ ಶಿಕ್ಷಣದ ಗುಣಮಟ್ಟ ಮತ್ತು ಉತ್ತಮ ಫಲಿತಾಂಶದಿಂದಾಗಿ ಸುತ್ತಲು ಗ್ರಾಮದ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ಮಳೆ ಬಂದರೇ ಕಾಲೇಜು ಸೋರಲಾರಂಭಿಸಿದೆ. ಹಾಗಾಗಿ ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ನಿವಾರಣೆ ಮಾಡಿದಲ್ಲಿ, ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.