ಬೆಳಗಾವಿ: ಅಮೆರಿಕ ದೇಶದ ಪ್ರಸಿದ್ಧ ನಯಾಗರ ಜಲಪಾತವನ್ನು ಹೋಲುವುದರಿಂದ ಭಾರತದ ನಯಾಗಾರವೆಂದೇ ಕರೆಯಲ್ಪಡುವ ನಯನ ಮನೋಹರ ಗೋಕಾಕ್ ಫಾಲ್ಸ್ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಆಕರ್ಷಕ ದೃಶ್ಯ ಕಂಡು ಜನ ಪುಳಕಗೊಳ್ಳುತ್ತಿದ್ದಾರೆ. ಹಾಸುಗಲ್ಲುಗಳ ಮೇಲೆ ಹರಿದು ಬರುವ ಜಲಧಾರೆಯ ಸೊಬಗು ನೋಡುವುದೇ ಒಂದು ಸಡಗರ.
ಪಶ್ಚಿಮ ಘಟ್ಟದಲ್ಲಿ ಅಕ್ಷರಶಃ ವರುಣರಾಯ ಅಬ್ಬರಿಸುತ್ತಿದ್ದಾನೆ. ಜಿಲ್ಲೆಯ ಘಟಪ್ರಭಾ, ಹಿರಣ್ಯಕೇಶಿ ನದಿಗಳಿಗೆ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಅಪಾರ ಪ್ರಮಾಣದ ನೀರು ಗೋಕಾಕ್ ಫಾಲ್ಸ್ನತ್ತ ಹರಿದುಬರುತ್ತಿದೆ. 170 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತ ತನ್ನ ರುದ್ರ ರಮಣೀಯ ದೃಶ್ಯವನ್ನು ಪ್ರದರ್ಶಿಸುತ್ತಿದೆ.
ನಿನ್ನೆ ಭಾನುವಾರ ವೀಕೆಂಡ್ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಗೋಕಾಕ್ ಫಾಲ್ಸ್ನಲ್ಲಿ ಜಮಾಯಿಸಿದ್ದರು. ಪ್ರಕೃತಿ ಸೌಂದರ್ಯ ನೋಡಿ ಜನರು ಸಂಭ್ರಮಿಸಿದರು. ಕುಟುಂಬಸಮೇತರಾಗಿ ಜನರು ಆಗಮಿಸಿದ್ದರು. ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ನೆರೆಯ ಮಹಾರಾಷ್ಟ್ರ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಪ್ರವಾಸಿಗರು ಮೋಹಕ ದೃಶ್ಯ ಕಣ್ತುಂಬಿಕೊಂಡು ಎಂಜಾಯ್ ಮಾಡಿದರು.