ಧಾರವಾಡ: ಮಳೆ ಕೈಕೊಟ್ಟ ಹಿನ್ನೆಲೆ ಸಂಕಷ್ಟ ಅನುಭವಿಸುತ್ತಿರುವ ರೈತರು ಪರ್ಯಾಯ ಮಾರ್ಗಗಳತ್ತ ಗಮನ ಹರಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂಬುದನ್ನು ಈ ಯುವ ರೈತ ಮಹಿಳೆ ಸಾಬೀತುಪಡಿಸಿದ್ದಾರೆ.
ಹೌದು, ಪ್ರಸ್ತುತ ವರ್ಷ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ನೀರಾವರಿ ಮೂಲಕ ಹಸಿ ಮೆಣಸಿನಕಾಯಿ ಬೆಳೆದು ರೈತ ಮಹಿಳೆಯೋರ್ವರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಗಿಡದ ತುಂಬ ಗೊಂಚಲು ಗೊಂಚಲು ಹಚ್ಚ ಹಸುರಿನ ಮೆಣಸಿನಕಾಯಿ. ಬಿಡುವಿಲ್ಲದೇ ಕಟಾವು ಮಾಡುತ್ತಿರುವ ರೈತ ಮಹಿಳೆಯರು.. ಈ ದೃಶ್ಯಗಳು ಕಂಡು ಬಂದದ್ದು ಧಾರವಾಡದ ಹೊರವಲಯದ ಜಮೀನಿನಲ್ಲಿ.
ಜಿಲ್ಲೆಯ ಕಮಲಾಪುರದ ಶಕುಂತಲಾ ಬಾಳಗಿ ಎಂಬ ರೈತ ಮಹಿಳೆ ಕೇವಲ ಒಂದು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದು ಇದೀಗ ಕೈತುಂಬ ಆದಾಯ ಗಳಿಸುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೊಗೆ ಚಿನ್ನದ ಬೆಲೆ ಇದೆ. ಇದರ ಬೆನ್ನಲ್ಲೇ ಮೆಣಸಿನಕಾಯಿಗೂ ಉತ್ತಮ ದರ ಸಿಗುತ್ತಿದೆ. ಪ್ರತಿ ಕ್ವಿಂಟಾಲ್ ಹಸಿ ಮೆಣಸಿನಕಾಯಿಗೆ ಇದೀಗ ಮಾರುಕಟ್ಟೆಯಲ್ಲಿ 5 ರಿಂದ 6 ಸಾವಿರ ರೂ. ಬೆಲೆ ಇದೆ. ಮಳೆ ಇಲ್ಲದ ಸಂದರ್ಭದಲ್ಲೂ ನೀರಾವರಿ ಬಳಕೆ ಮಾಡಿ ಈ ರೈತ ಮಹಿಳೆ ಭರಪೂರ ಮೆಣಸಿನಕಾಯಿ ಬೆಳೆ ಬೆಳೆದು ಅಧಿಕ ಲಾಭ ಗಳಿಸಿದ್ದಾರೆ.
ಪ್ರಸಕ್ತ ವರ್ಷ ಮಳೆ ರೈತನಿಗೆ ಮೋಸ ಮಾಡಿದೆ. ಮಳೆ ಇಲ್ಲದೇ ರೈತ ಹೊಲ ಬಿಟ್ಟು ಅಜ್ಞಾತವಾಸ ಅನುಭವಿಸುವಂತಾಗಿದೆ. ಹಾಗಂತ ನೀರಾವರಿ ಜಮೀನು ಇರುವ ರೈತರು ಕೈಕಟ್ಟಿ ಕುಳಿತುಕೊಂಡಿಲ್ಲ. ಮಳೆ ಆದರೂ ಸರಿ, ಆಗದಿದ್ದರೂ ಸರಿ, ಈ ನಾಡಿಗೆ ಅನ್ನ ನೀಡಬೇಕಾದವನು ರೈತ. ಹೀಗಾಗಿ ನೀರಾವರಿ ಜಮೀನು ಇರುವ ರೈತ ಅನೇಕ ಬೆಳೆಗಳನ್ನು ಬೆಳೆದಿದ್ದಾರೆ. ಅದರಲ್ಲೂ ಈ ಕೃಷಿ ಮಹಿಳೆ ಕೇವಲ ಒಂದು ಎಕರೆ ಜಮೀನಿನಲ್ಲಿ ಭರಪೂರ ಮೆಣಸಿನಕಾಯಿ ಬೆಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.