ಬೆಂಗಳೂರು: ಇಡೀ ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ. ಸರ್ಕಾರ ಮೊದಲೇ ತಿಳಿಸಿದಂತೆ ಬಿಟ್ ಕಾಯಿನ್ ಹಗರಣ ಮರು ತನಿಖೆಗೆ ಎಸ್‌ಐಟಿ (ವಿಶೇಷ ತನಿಖಾ ತಂಡ)ವನ್ನ ರಚನೆ ಮಾಡಿದೆ.
ಅದರ ಮುಖ್ಯಸ್ಥರನ್ನನಾಗಿ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ತಂಡದಲ್ಲಿ ಡಿಐಜಿ ವಂಶಿಕೃಷ್ಣ, ಡಿಸಿಪಿ ಅನೂಪ್ ಶೆಟ್ಟಿ, ಎಸ್ಪಿ ಶರತ್ ಸಹ ಇರಲಿದ್ದಾರೆ.
ತಂಡ ರಚನೆಯಾಗುತ್ತಿದ್ದಂತೆ ಸಿಐಡಿಯಲ್ಲಿ ಎಸ್‌ಐಟಿ ಅಧಿಕಾರಿಗಳ ಜೊತೆ ಸಿಐಡಿ ಡಿಜಿ ಎಂ. ಎ. ಸಲೀಂ ಸಭೆ ನಡೆಸಿದ್ದಾರೆ. ತನಿಖೆಯ ರೂಪುರೇಷಗಳ ಬಗ್ಗೆ ಚರ್ಚೆ ನಡೆಸಿದ್ದು, ಫೈಲ್ ವರ್ಗಾವಣೆ, ಕೆಳಹಂತದಿಂದ ಯಾವೆಲ್ಲ ಅಧಿಕಾರಿಗಳು ತಂಡದಲ್ಲಿ ಇರಬೇಕು ಎಂಬುದರ ಚರ್ಚೆ ಮಾಡಲಾಗಿದೆ. ಈಗಾಗಲೇ ಸಿಸಿಬಿಯಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಮೊದಲು ನ್ಯಾಯಾಲಯದ ಅನುಮತಿ ಪಡೆದು ತನಿಖೆ ಮುಂದುವರೆಸಲು ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಸಿಸಿಬಿಯಿಂದ ಪ್ರಕರಣದ ಕಡತಗಳ ವರ್ಗಾವಣೆ ಕೋರಿ ಪತ್ರ ಬರೆಯಲು ಎಸ್‌ಐಟಿ ಮುಂದಾಗಿದ್ದು ಕಡತಗಳು ಕೈಸೇರಿದ ಬಳಿಕ ಎಸ್‌ಐಟಿ ತನಿಖೆ ಆರಂಭವಾಗಲಿದೆ.