ಮಂಡ್ಯ: ಪ್ರಜಾಪ್ರಭುತ್ವದಲ್ಲಿ ರಾಜಕೀಯದ ಅಗತ್ಯತೆ ಬಹಳಷ್ಟು ಇದೆ. ಅದರೆ ರಾಜಕೀಯ ವೃತ್ತಿಯಾಗಬಾರದು, ಸೇವೆಯಾಗಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು. ಕನ್ನಡ ಸೇನೆ ಕರ್ನಾಟಕ ವತಿಯಿಂದ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಪ್ರಸ್ತುತ ರಾಜಕೀಯದಲ್ಲಿ ಯುವಜನರ ಪಾತ್ರ ಕುರಿತ ವಿಚಾರಣ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಎಸಿಬಿಯನ್ನು ಜಾರಿಗೆ ತಂದು ಲೋಕಾಯುಕ್ತಕ್ಕೆ ಇದ್ದ ಎರಡು ಅಧಿಕಾರಗಳಲ್ಲಿ ಒಂದು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಅಧಿಕಾರವನ್ನು ಕಿತ್ತುಕೊಂಡು ಬಿಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.
ಆಗ ವಿರೋಧ ಪಕ್ಷದಲ್ಲಿದ್ದರು ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಸಿಬಿಯನ್ನು ಬಂದ್ ಮಾಡುತ್ತೇವೆ ಎಂದು ಹೇಳುತ್ತಾರೆ. ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೂ ಎಸಿಬಿಯನ್ನು ರದ್ದು ಮಾಡುವುದಾಗಿ ಹೇಳಿದ್ದರು. ಅವರು ಅಧಿಕಾರಕ್ಕೆ ಬರುತ್ತಾರೆ, ಅಧಿಕಾರಕ್ಕೆ ಬಂದು 24 ತಿಂಗಳು ಸಿಎಂ ಆಗಿ ಅಧಿಕಾರ ನಡೆಸಿದರೂ ಬಂದ್ ಮಾಡಲಿಲ್ಲ. ಕೊನೆಗೆ ನ್ಯಾಯಾಲಯವೇ ಎಸಿಬಿಯನ್ನು ರದ್ದು ಮಾಡುತ್ತದೆ. ಅವಾಗ ಅಂದು ಮುಖ್ಯಮಂತ್ರಿಯಾಗಿದ್ದರು ಹೇಳುತ್ತಾರೆ ನಾವು ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಟ್ಟೆವು ಎಂದು. ಇದು ರಾಜಕೀಯನಾ ಎಂದು ಪ್ರಶ್ನಿಸಿದ ಸಂತೋಷ್ ಹೆಗ್ಡೆ, ಇದು ಮತದಾರರನ್ನು ಮಂಕು ಮಾಡುವ ಪ್ರಯತ್ನವಾಗಿದೆ ಎಂದು ಟೀಕಿಸಿದರು.
ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಾದರೆ ನಮ್ಮಿಂದ ಮಾತ್ರ ಸಾಧ್ಯ. ಮತದಾರರು ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಕ್ಷೇತ್ರಕ್ಕೆ ನಿಂತ ವ್ಯಕ್ತಿ ನಮ್ಮ ಹಿತ ಕಾಪಾಡುತ್ತಾನೋ ಇಲ್ಲವೋ ಎಂಬುದನ್ನು ನೋಡಬೇಕು. ಆಗ ಮಾತ್ರ ಆ ವ್ಯಕ್ತಿಗೆ ವೋಟು ಹಾಕಬೇಕು. ಯಾರೂ ಒಳ್ಳೆಯವರಲ್ಲ ಎಂದಾದರೆ ನೋಟಾಕ್ಕೆ ಮತ ಹಾಕಬೇಕು.