Breaking News

ಜಗನ್ನಾಥ ರಥಯಾತ್ರೆ: ಪುರಿಯಲ್ಲಿ ಕಾಲ್ತುಳಿತದಿಂದ 14 ಜನರಿಗೆ ಗಾಯ… ಅಹಮದಾಬಾದ್‌ನಲ್ಲಿ ಓರ್ವ ಸಾವು, 31 ಮಂದಿಗೆ ಗಾಯ

Spread the love

ಪುರಿ/ಅಹಮದಾಬಾದ್: ಒಡಿಶಾದ ಪುರಿಯಲ್ಲಿ ಮಂಗಳವಾರ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ.

ಇದರಿಂದ 14 ಜನರು ಗಾಯಗೊಂಡಿದ್ದು, ಸುಮಾರು 82 ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ವರದಿಯಾಗಿದೆ. ಮತ್ತೊಂದೆಡೆ, ಗುಜರಾತ್​ನ ಅಹಮದಾಬಾದ್‌ನಲ್ಲೂ ನಡೆಯುತ್ತಿದ್ದ ಜಗನ್ನಾಥ ರಥಯಾತ್ರೆಯಲ್ಲಿ ದುರ್ಘಟನೆ ಸಂಭವಿಸಿದೆ. ಮನೆಯೊಂದರ ಬಾಲ್ಕನಿಯ ಒಂದು ಭಾಗ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದಾರೆ.

ಪುರಿಯಲ್ಲಿ ಭಗವಾನ್ ಜಗನ್ನಾಥ ಮತ್ತು ಸಹೋದರ ಬಲಭದ್ರ ಮತ್ತು ಸುಭದ್ರೆಯ ಬೃಹತ್​ ರಥಗಳನ್ನು ಎಳೆಯುವ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯ ಭಕ್ತರು ಪಾಲ್ಗೊಂಡರು. ಬೆಳಗ್ಗೆ 9.30ಕ್ಕೆ ರಾಜ್ಯಪಾಲ ಗಣೇಶಿ ಲಾಲ್ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮುಖ್ಯ ಜಗನ್ನಾಥ ರಥದ ಹಗ್ಗಗಳನ್ನು ಎಳೆಯುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿದರು.

ಮಧ್ನಾಹ್ನ ಬಲಭದ್ರ ದೇವರ ತಾಳಧ್ವಜ ರಥ ಎಳೆಯುವ ಸಂದರ್ಭದಲ್ಲಿ ನೂಕುನುಗ್ಗಲು ಸಂಭವಿಸಿ ಕಾಲ್ತುಳಿತವಾಗಿದೆ. ಜನಸಂದಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಹಿಳಾ ಭಕ್ತರೊಬ್ಬರು ಕೆಳಗೆ ಬಿದ್ದಿದ್ದರಿಂದ ಈ ಘಟನೆ ನಡೆದಿದೆ. ಪರಿಣಾಮ 14 ಮಂದಿ ಗಾಯಗೊಂಡಿದ್ದು, ಇವರಲ್ಲಿ ಒಬ್ಬರು ಗಂಭೀರವಾಗಿದ್ದಾರೆ. ಎಲ್ಲರನ್ನು ಪುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ತಕ್ಷಣವೇ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಕೆಲವು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮುನ್ನ ಯಾತ್ರೆ ಸ್ಥಳದಲ್ಲಿ ಸ್ಥಾಪಿಸಲಾಗಿದ್ದ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ಹೇಳಿದ್ದಾರೆ. ಮತ್ತೊಂದೆಡೆ, ಅತಿಯಾದ ಶಾಖ ಮತ್ತು ಬಿಸಿಲಿನ ವಾತಾವರಣದಿಂದಾಗಿ ಸುಮಾರು 82 ಜನರು ಮೂರ್ಛೆ ಹೋಗಿದ್ದರು. ಅವರಿಗೂ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಜರಾತ್​ನಲ್ಲಿ ಓರ್ವ ಸಾವು: ಗುಜರಾತ್‌ನ ಅಹಮದಾಬಾದ್‌ನಲ್ಲೂ ಜಗನ್ನಾಥ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು. ದರಿಯಾರ್‌ಪುರ ಮೂಲಕ ರಥಯಾತ್ರೆ ಸಾಗುತ್ತಿದ್ದಾಗ ಮನೆಯ ಬಾಲ್ಕನಿ ಮೇಲೆ ಜನರು ನಿಂತು ವೀಕ್ಷಿಸುತ್ತಿದ್ದರು. ಈ ವೇಳೆ ಬಾಲ್ಕನಿಯ ಒಂದು ಭಾಗ ಕುಸಿದಿದೆ. ಪರಿಣಾಮವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 31 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಮೆಹುಲ್ ಪಾಂಚಾಲ್ ಎಂದು ಗುರುತಿಸಲಾಗಿದ್ದು, ಏಳು ಮಕ್ಕಳು ಸೇರಿದಂತೆ ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಎಲ್ಲರೂ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇವರಲ್ಲಿ ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವಿವರಿಸಿದ್ದಾರೆ. ಮಾಹಿತಿ ಪ್ರಕಾರ, ಕಟ್ಟಡದ ಎರಡನೇ ಮಹಡಿಯ ಬಾಲ್ಕನಿಯ ಒಂದು ಭಾಗ ಕುಸಿದಿದೆ. ಇದರಿಂದ ಕೋಲಾಹಲ ಉಂಟಾಗಿದ್ದು, ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ