ದಾವಣಗೆರೆ : ಕಳೆದ ಹಲವು ದಿನಗಳಿಂದ ಮುನಿಸಿಕೊಂಡಿದ್ದ ಮಳೆರಾಯ ಕೊನೆಗೂ ಕೃಪೆ ತೋರಿದ್ದಾನೆ.
ನಿನ್ನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಾದಂತ್ಯ ಧಾರಾಕಾರ ಮಳೆ ಸುರಿದಿದ್ದು, ಇಡೀ ಪಟ್ಟಣ ಅಸ್ತವ್ಯಸ್ತವಾಗಿತ್ತು. ಚನ್ನಗಿರಿ ಪಟ್ಟಣದಲ್ಲಿ ಸತತ ಒಂದು ಗಂಟೆಗಳ ಕಾಲ ಸುರಿದ ಮಳೆಯಿಂದ ಕೆಲ ರಸ್ತೆಗಳು ದ್ವೀಪದಂತಾಗಿದ್ದವು.
ಮಳೆ ಅವಾಂತರ : ನಿನ್ನೆ ಸುರಿದ ಮಳೆ ಚನ್ನಗಿರಿಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಉದ್ಯೋಗಿಗಳು, ಶಾಲಾ ಕಾಲೇಜಿನ ಮಕ್ಕಳು ಮನೆ ಸೇರಲು ಪರದಾಡಿದರು. ರಸ್ತೆಗಳ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದರಿಂದ ರಸ್ತೆ ಮೇಲೆ ನಿಲ್ಲಿಸಿದ ಬೈಕ್ಗಳು ತೇಲಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಇನ್ನು ಜೂನ್ ತಿಂಗಳ ಆರಂಭದಲ್ಲೇ ಮಳೆಯಾಗಬೇಕಿತ್ತು. ಮಳೆ ಇಲ್ಲದೇ ಇಲ್ಲಿನ ರೈತರು ಹಾಗೂ ಜನ ಬಸವಳಿದಿದ್ದರು. ತಾಲೂಕಿನ ಅಡಕೆ ಬೆಳೆಗಾರರ ಪರಿಸ್ಥಿತಿಯಂತೂ ಹೇಳತೀರಾದಾಗಿತ್ತು. ಆದರೆ ನಿನ್ನೆ ಒಂದು ಗಂಟೆಗಳ ಕಾಲ ಸುರಿದ ಮಳೆಯಿಂದ ಅಡಕೆ ಬೆಳೆಗಾರರು ಹಾಗೂ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಶಿವಮೊಗ್ಗದಲ್ಲೂ ಭಾರಿ ಮಳೆ : ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಮಲೆನಾಡಿಗೆ ನಿನ್ನೆ ಮಧ್ಯಾಹ್ನ ವರುಣ ತಂಪೆರೆದಿದ್ದ. ಜಿಲ್ಲಾದ್ಯಂತ ಸುರಿದ ಧಾರಾಕಾರ ಮಳೆಗೆ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಬಾರಿಯ ಮುಂಗಾರು 10 ದಿನಗಳ ಬಳಿಕ ರಾಜ್ಯಕ್ಕೆ ಆಗಮಿಸಿದ್ದು, ಮುಂಗಾರು ಬಿತ್ತನೆ ಕೂಡ ವಿಳಂಬವಾಗಿದೆ. ಇದೀಗ, ಮಳೆಯಾಗಿರುವುದು ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.