ನವದೆಹಲಿ: ಇದೇ ವರ್ಷದ ಅಂತ್ಯದಲ್ಲಿ ಅಂದರೆ ಡಿಸೆಂಬರ್ನಲ್ಲಿ ನಾಲ್ಕೈದು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ.
ಪ್ರಮುಖವಾಗಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ತೆಲಂಗಾಣ ಸೇರಿ ಇತರ ಕಡೆ ಎಲೆಕ್ಷನ್ ನಡೆಯಲಿವೆ. ಪ್ರಸ್ತುತ ಕಾಂಗ್ರೆಸ್ ನಾಯಕರು ಮಧ್ಯಪ್ರದೇಶದ ಮೇಲೆ ಚಿತ್ತ ಹರಿಸಿದ್ದಾರೆ.
ಕಳೆದ ಎಲೆಕ್ಷನ್ನಲ್ಲಿ ಅತಿಹೆಚ್ಚು ಸ್ಥಾನ ಗೆದ್ದು ಪಕ್ಷೇತರರ ಸಹಾಯದಿಂದ ಸರ್ಕಾರ ರಚಿಸಿ, ಆ ಬಳಿಕ ಸಿಂದಿಯಾ ಬಂಡಾಯದಿಂದ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್, ಈ ಬಾರಿ ಶತಾಯ- ಗತಾಯ ಅಧಿಕಾರ ಹಿಡಿಯಬೇಕು ಎಂದು ಯೋಚಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ಅವರ ಜಂಟಿ ರ‍್ಯಾಲಿ ನಡೆಸಲು ಯೋಜಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜಬಲ್‌ಪುರದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿದ ಒಂದು ದಿನದ ನಂತರ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರ ಜಂಟಿ ರ‍್ಯಾಲಿ ನಡೆಸುವ ಪ್ರಸ್ತಾಪ ಮಾಡಲಾಗಿದೆ.
ಜಬಲ್‌ಪುರದಲ್ಲಿ ಪ್ರಿಯಾಂಕಾ ಗಾಂಧಿ ಅವರ ಸಾರ್ವಜನಿಕ ಸಭೆಯ ಭವ್ಯ ಯಶಸ್ಸು ಕಂಡಿರುವ ಕಾಂಗ್ರೆಸ್, ಜುಲೈನಲ್ಲಿ ಬುಂದೇಲ್‌ಖಂಡ್ ಪ್ರದೇಶದಲ್ಲಿ ಖರ್ಗೆ ಮತ್ತು ರಾಹುಲ್ ಗಾಂಧಿಯವರ ಜಂಟಿ ರ‍್ಯಾಲಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ದಿನಾಂಕ ಮತ್ತು ಸ್ಥಳದ ಕುರಿತು ಅಂತಿಮ ಕರೆಯನ್ನು ನಿರ್ಧರಿಸಲಾಗುವುದು ಎಂದೂ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.