ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದ ಉದ್ದೇಶ ಸಮರ್ಪಕವಾಗಿ ಜಾರಿಯಾಗದೇ ತಜ್ಞ ವೈದ್ಯರ ಕೊರತೆ ಮತ್ತು ಎಂಆರ್ಐ ಹಾಗೂ ಡಯಾಲಿಸಿಸ್ ಯಂತ್ರಗಳನ್ನು ತಾಲೂಕು ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಅಳವಡಿಸದಿರುವುದಕ್ಕೆ ಮುಖ್ಯಮಂತ್ರಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ನರ್ಸ್ಗಳ ಕೊರತೆ ತಗ್ಗಿಸಲು ವೇತನ ಹೆಚ್ಚಳ ಪರಿಶೀಲನೆಗೆ ಸೂಚಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಭಿಯಾನದ ಕೊರತೆಗಳನ್ನು ಗುರುತಿಸಿ ಮುಂದಿನ ಸಭೆ ವೇಳೆಗೆ ಲೋಪಗಳನ್ನು ಸರಿಪಡಿಸಿರಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೇವೆಯ ಲಭ್ಯತೆ ಕುರಿತಂತೆ ಪ್ರತ್ಯೇಕವಾಗಿ ಪ್ರಗತಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಆರೋಗ್ಯ ಮಿಷನ್ನ ಅನುದಾನ ಸಕಾಲದಲ್ಲಿ ವೆಚ್ಚವಾಗದಿರುವುದನ್ನು ಗುರುತಿಸಿದರು. ಬಳಿಕ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಆರೋಗ್ಯ ವ್ಯವಸ್ಥೆ ಬಲಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಈ ಯೋಜನೆಯಡಿ ಶೇ.52ರಷ್ಟು ತಜ್ಞ ವೈದ್ಯರ ಕೊರತೆ ಇದೆ. ಶೇ.31 ರಷ್ಟು ಎಂಬಿಬಿಎಸ್ ವೈದ್ಯರ ಕೊರತೆ ಹಾಗೂ ಶೇ.18 ರಷ್ಟು ನರ್ಸ್ ಸಿಬ್ಬಂದಿ ಕೊರತೆ ಇರುವುದನ್ನು ಗಮನಿಸಿದ ಮುಖ್ಯಮಂತ್ರಿಗಳು, ಇವರಿಗೆ ವೇತನ ಹೆಚ್ಚಳ ಮಾಡುವ ಬಗ್ಗೆ ಪರಿಶೀಲಿಸಿ, ಈ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆನಿರಂತರವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಪ್ರಗತಿ ಪರಿಶೀಲನೆ ಮಾಡಬೇಕು. ನಿಗದಿತ ಗುರಿ ಸಾಧನೆಯನ್ನು ಖಾತರಿ ಪಡಿಸಬೇಕು ಹಾಗೂ ಅನುದಾನ ಸಕಾಲದಲ್ಲಿ ವೆಚ್ಚ ಮಾಡಬೇಕು ಎಂದು ಮುಖ್ಯಮಂತ್ರಿಗಳು ಇಲಾಖೆಯ ಆಯುಕ್ತರಿಗೆ ಸೂಚಿಸಿದರು. ಕಳೆದ ಒಂದು ವರ್ಷದಲ್ಲಿ ನಿಗಮಕ್ಕೆ 5 ಎಂಡಿ ನೇಮಕ ಮಾಡಿರುವುದರಿಂದ ಸಮಸ್ಯೆ ಆಗಿರುವುದನ್ನು ಅಧಿಕಾರಿಗಳಿಂದ ಕೇಳಿ ತಿಳಿದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರದ ಅವಧಿಯಲ್ಲಿ ಈ ರೀತಿ ಆಗುವುದಿಲ್ಲ ಎಂದು ಭರವಸೆ ನೀಡಿದ್ದಲ್ಲದೇ, ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕನಿಷ್ಠ 2 ವರ್ಷ ಸೇವೆ ಸಲ್ಲಿಸಬೇಕು ಎಂದು ಸೂಚಿಸಿದರು.
ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಎಂ.ಆರ್.ಐ. ಸ್ಕ್ಯಾನಿಂಗ್ ಹಾಗೂ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಬೇಕು ಹಾಗೂ ಈ ಎಲ್ಲ ಸೇವೆಗಳನ್ನು ಒದಗಿಸಲು ತಂತ್ರಜ್ಞರನ್ನು ನೇಮಕ ಮಾಡಬೇಕು ಎಂದು ಸೂಚಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡಜನರಿಗೆ ಈ ವಿಶೇಷ ಸೇವೆಗಳನ್ನು ಒದಗಿಸದಿದ್ದರೆ ಅವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಹೇಗೆ ಸಾದ್ಯ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಮೂರು ತಿಂಗಳಲ್ಲಿ ವ್ಯವಸ್ಥೆ ಸರಿಪಡಿಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಜನ ಬರಬೇಕು. ಮೂರು ತಿಂಗಳಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇನೆ. ಇದೇ ಪರಿಸ್ಥಿತಿ ಮುಂದುವರಿದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಸಿದರು. ಗ್ರಾಮೀಣ ಪ್ರದೇಶದಲ್ಲಿ ವೈದ್ಯರಿಗೆ ಕಟ್ಟಿಸಿರುವ ವಸತಿಗೃಹದಲ್ಲಿ ಯಾವ ವೈದ್ಯರೂ ಉಳಿದುಕೊಳ್ಳುತ್ತಿಲ್ಲ. ಈ ಲೋಪ ಸರಿಪಡಿಸುವಂತೆ ಆಯುಕ್ತರಿಗೆ ಸೂಚಿಸಿದರು.