ರಾಯಬಾಗ: ‘ಭ್ರಷ್ಟರೇ ಅಧಿಕಾರ ಬಿಟ್ಟು ತೊಲಗಿ, ಇಲ್ಲವೇ ಬಡ ಜನರ ಕೆಲಸಗಳನ್ನು ಮಾಡಿ ಕೊಡಿ’ ಎಂದು ತಾಲ್ಲೂಕಿನ ಬಸ್ತವಾಡ ಗ್ರಾಮದ ರೈತ ಅನಿಲ ಕಾಂಬಳೆ ಶುಕ್ರವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.
ತಮ್ಮ ಜಮೀನು ಸರ್ವೆ ಮಾಡಲು ರಾಯಬಾಗ ಸರ್ವೇಯರ್ ಹಣದ ಬೇಡಿಕೆ ಇಟ್ಟಿದ್ದು, ಅವರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.
ತಮ್ಮ ಜಮೀನನ್ನು ಸರ್ವೆ ಮಾಡಿ ಕೊಡಿ ಎಂದು ಭೂ ಮಾಪನ ಇಲಾಖೆಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ್ದರು. ಭೂ ಮಾಪನ ಅರ್ಜಿ ಪರಿಶೀಲಿಸಿದ ಸರ್ವೇಯರ್ ಶಬಾನಾ ರಾಮದುರ್ಗ ಸರ್ವೆ ಮಾಡಿ ಕೊಡಲು ₹ 20ಸಾವಿರ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದರು. ತಪ್ಪಿತಸ್ಥ ಸರ್ವೇಯರ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆಳಗಾವಿ ಭೂದಾಖಲೆಗಳ ಉಪನಿರ್ದೇಶಕರು ಹಿಂಬರಹ ನೀಡಿದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರೈತ ಅನಿಲ ಕಾಂಬಳೆ ಸರ್ವೇಯರ್ ವಿರುದ್ಧ ನೀಡಿದ ದೂರಿನನ್ವಯ ಮೇಲಧಿಕಾರಿಗಳ ಗಮನಕ್ಕೆ ತಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿ 24ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ ಎಂದು ರಾಯಬಾಗ ಭೂ ದಾಖಲೆಗಳ ಸಹಾಯಕ ನಿರ್ದೇಶಕ ವಿರೂಪಾಕ್ಷ ಅಗಸಗಿ ತಿಳಿಸಿದ್ದಾರೆ.