ಕಾರವಾರ : ಕೋವಿಡ್–19 ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಕಲ್ಲಂಗಡಿ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರದಿಂದ ನಿರ್ಧರಿಸಲಾಗಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹಾನಿಗೊಳಗಾದ ಕಲ್ಲಂಗಡಿ ಬೆಳೆಗಳಿಗೆ ಪ್ರತಿ ಹೆಕ್ಟೇರ್ ಗೆ ರೂ. 15 ಸಾವಿರ ಗರಿಷ್ಠ ಪರಿಹಾರ ಧನವನ್ನು ಪ್ರತಿ ಫಲಾನುಭವಿಗೆ ಗರಿಷ್ಠ ಒಂದು ಹೆಕ್ಟೇರ್ ವಿಸ್ತೀರ್ಣಕ್ಕೆ ಮಿತಿಗೊಳಿಸಿ ನೀಡಲಾಗುವುದು.
ಅರ್ಜಿ ಸಲ್ಲಿಸಬಯಸುವ ಫಲಾನುಭವಿಯು ಜೂನ್ 12 ರೊಳಗೆ ಸಂಬಂಧಿತ ತಾಲ್ಲೂಕಿನ ತೋಟಗಾರಿಕಾ ಕಛೇರಿಗೆ ನಿಗದಿತ ಅರ್ಜಿ ನಮೂನೆಯೊಂದಿಗೆ ಕಲ್ಲಂಗಡಿ ಬೆಳೆ ಬೆಳೆದಿರುವ ಜಮೀನಿನ ಪಹಣಿ, ಆಧಾರ್ ಕಾರ್ಡ, ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಸಲ್ಲಿಸುವುದು. ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು ಮತ್ತು ನೊಟರಿಯವರಿಂದ ದೃಢೀಕರಣ ಮಾಡಿಸಬೇಕು. ಫಲಾನುಭವಿಗಳು ಕಲ್ಲಂಗಡಿ ಬೆಳೆ ಬೆಳೆದಿರುವ ರೈತರಾಗಿರತಕ್ಕದ್ದು, ಹಾಗೂ ಜಮೀನು ಅವರ ಹೆಸರಿನಲ್ಲಿರಬೇಕು. ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನಿದ್ದು, ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮ ಲೆಕ್ಕಿಗರಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸುವುದು.
ಮಹಿಳೆಯ ಹೆಸರಿನಲ್ಲಿ ಖಾತೆ ಹೊಂದಿದ್ದು, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಕಾರಣಕ್ಕೂ ಮಾನ್ಯ ಮಾಡಲಾಗುವುದಿಲ್ಲಾ, ಮಹಿಳೆಯರ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸುವುದನ್ನು ಉತ್ತೇಜಿಸಲಾಗುವುದು. ಕಲ್ಲಂಗಡಿ ಬೆಳೆಗಾರರು ಅರ್ಜಿ ಸಲ್ಲಿಸಿದ ನಂತರದಲ್ಲಿ ಹೋಬಳಿ ಮಟ್ಟದ ಸಮಿತಿಯಿಂದ ಸ್ಥಳ ಪರಿಶೀಲನೆ ನಡೆಸಿ ಖಾತ್ರಿಪಡಿಸಿಕೊಂಡ ನಂತರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಾರವಾರದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸುನೀಲ್ ಚಂದ್ರಹಾಸ ಅಂಕೋಲೆಕರ್ ರವರನ್ನು ಸಂಪರ್ಕಿಸಲು ಕೋರಿದೆ.