Breaking News

ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಹ ಮೈಸೂರು, ರಾಮನಗರ, ಚಿನ್ನದ‌ ನಾಡು ಕೋಲಾರಕ್ಕೆ ಭೇಟಿ ನೀಡಿ ಚುನಾವಣೆಯ ರಣಕಹಳೆಯನ್ನು ಮೊಳಗಲಿಸಲು ಮುಂದಾಗಿದ್ದಾರೆ.

Spread the love

ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೋಲಾರ, ಚನ್ನಪಟ್ಟಣ ಬೃಹತ್​​ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಂತರ ಮೈಸೂರಿಗೆ ತೆರಳಿ ಮೆಗಾ ರೋಡ್​​ ಶೋ ನಡೆಸಲಿದ್ದಾರೆ. ಕೋಲಾರ/ಮೈಸೂರು: ರಾಜ್ಯದಲ್ಲಿ ಚುನಾವಣೆಯ ಕಾವು‌ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಭ್ಯರ್ಥಿಗಳ ಪರ ಮತಯಾಚನೆ‌ ಮಾಡಲು ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಲಗ್ಗೆಯಿಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಹ ಮೈಸೂರು, ರಾಮನಗರ, ಚಿನ್ನದ‌ ನಾಡು ಕೋಲಾರಕ್ಕೆ ಭೇಟಿ ನೀಡಿ ಚುನಾವಣೆಯ ರಣಕಹಳೆಯನ್ನು ಮೊಳಗಲಿಸಲು ಮುಂದಾಗಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡ‌ ಚುನಾವಣೆ ಪ್ರಚಾರ ಸಭೆಯನ್ನು ಕೋಲಾರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಕೆಂದಟ್ಟಿ ಬಳಿ ಇಂದು ಹಮ್ಮಿಕೊಳ್ಳಲಾಗಿದೆ. 150 ಎಕರೆ ಪ್ರದೇಶದಲ್ಲಿ‌ ಬೃಹತ್ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ಜನರು ಭಾಗವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡ ಸುಮಾರು 14 ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಮತಯಾಚನೆ ಮಾಡಲಿದ್ದಾರೆ.‌

ಪ್ರಧಾನಿ ಮೋದಿ ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್ ಮುಖಾಂತರ 1 ಗಂಟೆಗೆ ಕೋಲಾರಕ್ಕೆ ಆಗಮಿಸಲಿದ್ದು, ನಂತರ 1 ಗಂಟೆ 10 ನಿಮಿಷಗಳ ಕಾಲ‌ ಜನರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು 2008ರ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಿಂದ ಬಿಜೆಪಿಗೆ ಮೂರು ಶಾಸಕರನ್ನು ನೀಡಿತ್ತು. ಜಿಲ್ಲೆಯ ಬಂಗಾರಪೇಟೆ, ಕೆಜಿಎಫ್ ಮತ್ತು ಮಾಲೂರು ಕ್ಷೇತ್ರದಲ್ಲಿ ತನ್ನ ಅಧಿಪತ್ಯ ಸಾಧಿಸಿದ್ದ ಬಿಜೆಪಿ ಈಗ ಮತ್ತೊಮ್ಮೆ ಜಿಲ್ಲೆಯಲ್ಲಿ ಕಮಲ ಅರಳಿಸಲು ಹವಣಿಸುತ್ತಿದೆ.

ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಷ್ಟೀಯ ನಾಯಕರು ಈಗ ಪ್ರಧಾನಿಯವರನ್ನೇ ಜಿಲ್ಲೆಗೆ ಕರೆತರುತ್ತಿದ್ದಾರೆ. ಬೃಹತ್ ಸಮಾವೇಶದ ಮೂಲಕ ಜಿಲ್ಲೆಯಲ್ಲಿ ಮತದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ. ಇನ್ನು‌ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಕೋಲಾರ, ಚಿಕ್ಕಬಳ್ಳಾಪುರ ಮತ್ತು‌ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಮಲ ಅರಳಿಸಲು ಬಿಜೆಪಿ ರಣತಂತ್ರ ರೂಪಿಸಿದೆ.

ಇನ್ನು ಚಿನ್ನದ ನಾಡಿಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿಶೇಷ ಕೊಡುಗೆಯನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು. ಸುಮಾರು 3.5 ಅಡಿಯ 30 ಕೆಜಿಯ ಬುದ್ಧನ ಪ್ರತಿಮೆಯನ್ನು ನೀಡಲಾಗುತ್ತಿದೆ.‌ ಕೋಲಾರ ಸಮಾವೇಶದ ಬಳಿಕ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ಬೃಹತ್ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೈಸೂರಿನಲ್ಲಿ‌ 4ಕಿ.ಮೀ. ಮೋದಿ ರೋಡ್ ಶೋ: ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ನಗರದಲ್ಲಿ ಭಾನುವಾರ ಸಂಜೆ ನಾಲ್ಕು ಕಿ.ಮೀ. ಬೃಹತ್ ರೋಡ್ ಶೋ ನಡೆಸಲಿದ್ದು, ಇದರಲ್ಲಿ ಒಂದು ಲಕ್ಷ ಮಂದಿ ಭಾಗವಹಿಸಲಿದ್ದಾರೆ ಎಂದು ಮುಡಾ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ತಿಳಿಸಿದರು.

ಸಂಜೆ ಐದು ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜ್ ಮೈದಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿಯಲಿರುವ ನರೇಂದ್ರ ಮೋದಿ ಬಳಿಕ ಗನ್ ಹೌಸ್‌ನಿಂದ ರೋಡ್ ಶೋ ಪ್ರಾರಂಭಿಸಲಿದ್ದಾರೆ. ಮೈಸೂರು ನಗರದ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹ ರಾಜ ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆಯಿಂದ ದಸರಾದ ಜಂಬೂಸವಾರಿ ಮೆರವಣಿಗೆ ಹಾದುಹೋಗುವ ರಾಜ ಮಾರ್ಗದಲ್ಲಿ ಮೋದಿ ರೋಡ್ ಶೋ ನಡೆಸಲಿದ್ದು, ಈ ಮೂಲಕ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮತದಾರರಿಗೆ ಮನವಿ ಮಾಡಲಿದ್ದಾರೆ. ಗನ್‌ಹೌಸ್ ವೃತ್ತದಿಂದ ಹೊರಟು ಬಸವೇಶ್ವರ ವೃತ್ತ, ಚಾಮರಾಜ ಜೋಡಿರಸ್ತೆ, ನಗರಪಾಲಿಕೆ ರಸ್ತೆ, ಕೆ.ಆರ್.ವೃತ್ತ, ಆಯುರ್ವೇದ ವೃತ್ತ, ಬಂಬೂಬಜಾರ್ ರಸ್ತೆ, ಹೈವೇ ಸರ್ಕಲ್, ಎಲ್‌ಐಸಿ ಸರ್ಕಲ್‌ನಲ್ಲಿ ರೋಡ್ ಶೋ ಅಂತ್ಯವಾಗಲಿದೆ.

1 ಟನ್ ಹೂವು ಸಂಗ್ರಹಣೆ: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಸಂಚಾಲಕ ಡಾ.ಜಿ.ಆರ್. ಚಂದ್ರಶೇಖರ್ ವಾತನಾಡಿ, ಭಾನುವಾರ ಸಂಜೆ 5.30 ರೋಡ್ ಶೋ ಆರಂಭವಾಗಲಿದ್ದು, ನರಸಿಂಹರಾಜ, ಕೃಷ್ಣರಾಜ, ಚಾಮರಾಜ, ವರುಣಾ, ಚಾಮುಂಡೇಶ್ವರಿ ಕ್ಷೇತ್ರಗಳಿಂದ ಲಕ್ಷಾಂತರ ಮಂದಿ ಬಂದು ಭಾಗವಹಿಸಲಿದ್ದಾರೆ. ರೋಡ್ ಶೋ ಉದ್ದಕ್ಕೂ ಮೋದಿಯವರಿಗೆ ರಸ್ತೆಯ ಬದಿಯಲ್ಲಿ ಜನರು ಪುಷ್ಪವೃಷ್ಠಿಯನ್ನು ಮಾಡಲಿದ್ದಾರೆ. ಇದಕ್ಕಾಗಿ 1 ಟನ್ ಹೂವುಗಳನ್ನು ಸಂಗ್ರಹಿಸಿಡಲಾಗಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

ವಕ್ಫ್‌ ಆಸ್ತಿ ಗೊಂದಲ ನಿವಾರಿಸದಿದ್ದರೆ ಹೋರಾಟ: ರಾಜೂಗೌಡ

Spread the love ಹುಣಸಗಿ: ಸುರಪುರ ಮತಕ್ಷೇತ್ರದ ಸೇರಿ ಯಾದಗಿರಿ ಜಿಲ್ಲೆಯಲ್ಲಿ ಸ್ವಂತ ಮಾಲಿಕತ್ವ ಹೊಂದಿದ ರೈತನ ಜಮೀನನ್ನು ವಕ್ಫ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ