ಧಾರವಾಡ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ 12 ರ್‍ಯಾಲಿಗಳನ್ನು ನಡೆಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಧಾರವಾಡದ ಸನ್ನಿಧಿ ಕಲಾಕ್ಷೇತ್ರದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಪರ ಪ್ರಚಾರ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೋದಿ ಬಂದ ಬಳಿಕ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ವಾತಾವರಣ ಬದಲಾಗಲಿದೆ. ಹೀಗಾಗಿ ಕಾಂಗ್ರೆಸ್‌ನವರು ಮೈಕೈ ಪರಚಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನಿಂದ ಯಾವುದೇ ಅಸ್ತ್ರ ಪ್ರಯೋಗ ಮಾಡಲಿ ಅಥವಾ ಯಾರ ಹೆಸರೇ ಪ್ರಸ್ತಾಪ ಮಾಡಲಿ ರಾಜ್ಯದ ಜನರಿಗೆ ಎಲ್ಲವೂ ಗೊತ್ತಿದೆ. ಜನ ಬಿಜೆಪಿ ಪರವಾಗಿದ್ದಾರೆ ಎಂದರು.
ಕಾಂಗ್ರೆಸ್‌ನವರಿಗೆ ಯಾವುದೇ ಹೆಸರು ಪ್ರಸ್ತಾಪಕ್ಕೆ ಸಿಗದೇ ಇದ್ದಾಗ ಬೇರೆ ಬೇರೆಯವರ ಹೆಸರು ತೆಗೆದುಕೊಂಡು ವಿವಾದ ಮಾಡುತ್ತಾರೆ. ಸಂತೋಷ ಜಿ ಮತ್ತು ಬೇರೆ ಬೇರೆಯವರ ಹೆಸರು ತೆಗೆದುಕೊಳ್ಳುವ ಅಗತ್ಯ ಇಲ್ಲ. ಪಕ್ಷದ ವಿದ್ಯಮಾನಗಳು ನಮ್ಮ ಪಕ್ಷದಲ್ಲೇ ನಡೆಯುತ್ತವೆ. ಯಾವುದೇ ಒಂದು ವ್ಯಕ್ತಿಯ ಮೇಲೆ ಇರುವುದಿಲ್ಲ. ಕಾಂಗ್ರೆಸ್ ಲಿಂಗಾಯತರನ್ನು ಹೇಗೆ ನಡೆಸಿಕೊಂಡಿದೆ ಎನ್ನುವುದರ ಮೇಲೆ ವೀರೇಂದ್ರ ಪಾಟೀಲರಿಗೆ ಹೇಗೆ ಅವಮಾನ ಮಾಡಿದ್ದರು, ನಿಜಲಿಂಗಪ್ಪನವರಿಗೆ ಇಂದಿರಾ ಗಾಂಧಿ ಹೇಗೆ ಅಪಮಾನ ಮಾಡಿದ್ದರು ಎಂಬುದು ಇತಿಹಾಸ. ಹೀಗಾಗಿ ಕಾಂಗ್ರೆಸ್ ಏನೇ ಲಿಂಗಾಯತ ಅಸ್ತ್ರ ಪ್ರಯೋಗಿಸಿದರೂ ಜನ ಒಪ್ಪುವುದಿಲ್ಲ. ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.