ಗದಗ: ಜಿಲ್ಲಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಜಿಲ್ಲೆಯ ವಿವಿಧೆಡೆ ದಾಖಲೆ ರಹಿತ 95 ಲಕ್ಷ ರೂ. ನಗದು ಹಾಗೂ 80,252 ರೂ ಮೌಲ್ಯದ 188.28 ಲೀ. ಮದ್ಯ ವಶಪಡಿಸಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ದಂಡಿನ ದುರ್ಗಮ್ಮ ದೇವಸ್ಥಾನದ ಹತ್ತಿರ ತೆರೆಯಲಾದ ಚೆಕ್‌ಪೋಸ್ಟ್ನಲ್ಲಿ 4 ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ರಹಿತ 95 ಲಕ್ಷ ರೂ. ನಗದು ಪತ್ತೆಯಾಗಿದೆ. ನಗದು ಬ್ಯಾಂಕಿಗೆ ಸಂಬಂಧಿಸಿದ್ದಾಗಿದೆಯೇ ಎಂಬುದರ ಕುರಿತು ಸ್ಥಳಕ್ಕೆ ಆಗಮಿಸಿದ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹರ್ತಿ ಗ್ರಾಮವೊಂದರಲ್ಲೇ ಪತ್ರತ್ಯೇಕ ಮೂರು ಪ್ರಕರಣಗಳಡಿ 80,252 ರೂ. ಮೌಲ್ಯದ 188.28 ಲೀ. ಮದ್ಯವನ್ನು ವಶಕ್ಕೆ ಪಡೆದು ಪ್ರತ್ಯೇಕ 5 ಪ್ರಕರಣಗಳನ್ನು ದಾಖಲಿಸಲಾಗಿದೆ. ಉಳಿದಂತೆ ಪೊಲೀಸ್ ಇಲಾಖೆ ಕಾರ್ಯಾಚರಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳಡಿ ಶಿರಹಟ್ಟಿಯಲ್ಲಿ 20,404 ರೂ. ಮೌಲ್ಯದ 41 ಲೀ. ಮದ್ಯ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ರೋಣ ತಾಲೂಕಿನ ಮುಶಿಗೇರಿ ಚೆಕಪೋಸ್ಟ್ನಲ್ಲಿ ಎಸ್‌ಎಸ್‌ಟಿ ತಂಡದ ಕಾರ್ಯಾಚರಣೆಯಲ್ಲಿ 1,08,500 ರೂ. ದಾಖಲೆ ರಹಿತ ನಗದನ್ನು ವಶಕ್ಕೆ ಪಡೆಯಲಾಗಿದೆ.