ಧಾರವಾಡ, ಏಪ್ರಿಲ್, 04: ಧಾರವಾಡದ ಸಾಮನ್ ಡೆವಲಪರ್ಸ್‌ನವರು ಬಾಗೇವಾಡಿ ಹದ್ದಿನಲ್ಲಿ ಗಾಂಧಿನಗರ ನಿವಾಸಿಯಾದ ರವಿ ಸುರಗೊಂಡ ಅವರಿಗೆ ಪ್ಲಾಟ್ ನಂ.ಎ-92 ಹಾಗೂ ಎ-93 ಅನ್ನು ಒಟ್ಟು 9 ಲಕ್ಷ ರೂಪಾಯಿಗೆ 2012ರಲ್ಲಿ ಮಾರಾಟ ಮಾಡಿದ್ದರು. ಇದಕ್ಕೆ ರವಿ ಅವರು 4 ಲಕ್ಷ ರೂಪಾಯಿ ಮುಂಗಡ ಹಣ ಕೊಟ್ಟು ಒಪ್ಪಂದ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದರು.
ಆದರೆ 7-8 ವರ್ಷ ಕಳೆದರೂ ಡೆವಲಪರ್ಸ್ ಈ ಜಮೀನಿನನ್ನು ಅಭಿವೃದ್ಧಿಪಡಿಸಲಿಲ್ಲ.
ದೂರುದಾರ ರವಿಯವರು ಅಭಿವೃದ್ಧಿಪಡಿಸಿ ಪ್ಲಾಟ್ ಕೊಡುವಂತೆ ಹಲವು ಬಾರಿ ವಿನಂತಿಸಿದರೂ ಎದುರುದಾರರು ಪ್ಲಾಟ್ ಕೊಟ್ಟಿರಲಿಲ್ಲ. ಹೀಗಾಗಿ ಬೇಸತ್ತ ರವಿಯವರು, ಸಾಮನ್ ಡೆವಲಪರ್ಸ್‌ನವರು ನಮಗೆ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಸಾಮನ್ ಡೆವಲಪರ್ಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಕೂಡ ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಸೂಕ್ತ ಕ್ರಮ ಕೈಗೊಳ್ಳುವಂತೆ ತೀರ್ಪು ನೀಡಿದ್ದಾರೆ. ಸಾಮನ್ ಡೆವಲಪರ್ಸ್‌ನವರು 2012ರಲ್ಲಿ ಪ್ಲಾಟ್ ಅಭಿವೃದ್ಧಿಗೊಳಿಸಿ ಮಾರಾಟ ಮಾಡುವುದಾಗಿ ಹೇಳಿ ದೂರುದಾರರಿಂದ ಮುಂಗಡವಾಗಿ 4 ಲಕ್ಷ ರೂಪಾಯಿ ಪಡೆದಿದ್ದರು.
ಆದರೆ 7-8 ವರ್ಷ ಕಳೆದರೂ ಯಾವುದೇ ಜಮೀನಿನನ್ನು ಅಭಿವೃದ್ಧಿಪಡಿಸದೇ ರವಿಯವರು ನೀಡಿದ್ದ ಹಣವನ್ನು ಸಾಮನ್ ಡೆವಲಪರ್ಸ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಹಣ ಸಂದಾಯ ಮಾಡುವಂತೆ ತೀರ್ಪು
ಅಕ್ಟೋಬರ್ 20, 2012ರಿಂದ 4 ಲಕ್ಷ ರೂಪಾಯಿಗಳ ಮೇಲೆ ಶೇಕಡಾ 8 ರಂತೆ ಹಣ ಸಂದಾಯವಾಗುವವರೆಗೆ ಬಡ್ಡಿ ಲೆಕ್ಕಹಾಕಿ ದೂರುದಾರರಿಗೆ ಹಿಂದಿರುಗಿಸಲು ಆಯೋಗ ತಿಳಿಸಿದೆ. ಅಲ್ಲದೇ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ 50 ಸಾವಿರ ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ 10 ಸಾವಿರ ರೂಪಾಯಿಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಸಾಮನ್ ಡವಲಪರ್ಸ್ ಮ್ಯಾನೇಜಿಂಗ್ ಪಾರ್ಟನರ್ ವಿನಯ ಸಾಹುಕಾರನಿಗೆ ಆಯೋಗ ಆದೇಶಿಸಿದೆ.
ಹರಿಯಾಣ ಮೂಲದ ಕಂಪನಿಗೆ 25 ಸಾವಿರ ರೂ. ದಂಡ
ಧಾರವಾಡದ ಸಾಧುನವರ ಎಸ್ಟೇಟ್‍ನ ಶಿವಕುಮಾರ ಮಠದ ಎನ್ನುವವರು ಆನ್‍ಲೈನ್ ಮೂಲಕ ಹರಿಯಾಣದ ಸೋಮಾನುವಾ ಹೋಮ್ ಇನ್ನೋವೇಷನ್‌ನವರಿಂದ ಗೀಜರ್ ಇತ್ತೀಚೆಗಷ್ಟೇ ಖರೀದಿಸಿದ್ದರು. 5,399 ರೂಪಾಯಿ ಹಣ ನೀಡಿ ಅಕ್ಟೋಬರ್ 25, 2021ರಂದು ಗೀಜರ್ ಖರೀದಿಸಿದ್ದರು. ಕೇವಲ 15ರಿಂದ 20 ದಿನದಲ್ಲಿ ಆ ಗೀಜರ್ ದೋಷಪೂರಿತ ಅಂತಾ ಗೊತ್ತಾಗಿದೆ.
ಇದೀಗ ದೂರುದಾರ ಆರೋಪದ ಮೇರೆಗೆ ಜಿಲ್ಲಾ ಗ್ರಾಹಕರ ಆಯೋಗ ಕಂಪನಿಗೆ (ಮಾರ್ಚ್ 14ರಂದು) ದಂಡ ವಿಧಿಸಿ ಆದೇಶ ನೀಡಿದೆ. ಈ ಬಗ್ಗೆ ಶಿವಕುಮಾರ ಮಠದ ಅವರು ಕಂಪನಿಯವರಿಗೆ ಮೇಲ್ ಮೂಲಕ ದೂರು ಕೊಟ್ಟಿದ್ದರು. 2-3 ಬಾರಿ ರಿಪೇರಿ ಮಾಡಿದ್ದರೂ ಕೂಡ ಗೀಜರ್ ಸರಿಯಾಗಿರಲಿಲ್ಲ. ಬೇರೆ ಗೀಜರ್ ಕೊಡುತ್ತೇವೆ ಅಂತಾ ಹೇಳಿ ಕೊಟ್ಟಿರಲಿಲ್ಲ.
ಹಾಗಾಗಿ ತನಗೆ ಮೋಸ ಮಾಡಿದರವ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದೀಗ ತೀರ್ಪು ನೀಡಿದ ಆಯೋಗ ಕಂಪನಿಗೆ 25,399 ರೂ. ದಂಡ ವಿಧಿಸಿ ಆದೇಶ ನೀಡಿದೆ.
ಈ ದೂರಿನ ಬಗ್ಗೆ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು.ಸಿ.ಹಿರೇಮಠ ಅವರು ಕೂಲಂಕುಷವಾಗಿ ವಿಚಾರಣೆ ನಡೆಸಿದ್ದಾರೆ. ವಾರಂಟಿ ಅವಧಿಯಲ್ಲಿ ಗೀಜರ್ ದೋಷಪೂರಿತ ಅಂತಾ ಕಂಡುಬಂದಿದೆ. ಮತ್ತು ದೂರು ಕೊಟ್ಟರೂ ಆ ದೋಷವನ್ನು ಸರಿಪಡಿಸದೇ ಅಥವಾ ಗೀಜರ್ ಬದಲಾಯಿಸದೇ ಗ್ರಾಹಕರಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪುನೀಡಿದೆ.