ಬೆಂಗಳೂರು: ಮಹಿಳೆಯೊಬ್ಬಳು ತನ್ನ ಮನೆಯ ಕೋಣೆಯಲ್ಲಿ ಶವವಾಗಿ ನೇತಾಡುತ್ತಿದ್ದ ಪರಿಸ್ಥಿತಿಯಲ್ಲಿ ಕಂಡುಬಂದಿದ್ದು, ಪತಿಯ ವಿರುದ್ಧ ಆರೋಪ ಹೊರಿಸಲಾಗಿದೆ. ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ರಶ್ಮಿ (32) ಸಾವಿಗೀಡಾದ ಮಹಿಳೆ. ಬೆಂಗಳೂರಿನ ಪೂರ್ಣಪ್ರಜ್ಞಾ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಈಕೆ ತಾನು ವಾಸವಿದ್ದ ಮನೆಯ ಕೋಣೆಯಲ್ಲಿ ಶವವಾಗಿ ನೇತಾಡುತ್ತಿದ್ದ ಪರಿಸ್ಥಿತಿಯಲ್ಲಿ ಕಂಡುಬಂದಿದ್ದಾಳೆ. ಈಕೆ ಖಾಸಗಿ ಕಂಪನಿಯ ಇಂಜಿನಿಯರ್ ಅರವಿಂದ್ ಎಂಬಾತನ ಪತ್ನಿ.
ಮಂಡ್ಯ ಮೂಲದ ರಶ್ಮಿ ಮತ್ತು ಶ್ರೀರಂಗಪಟ್ಟಣದ ಅರವಿಂದ್ ಮದುವೆ ಹತ್ತು ವರ್ಷಗಳ ಹಿಂದೆ ನಡೆದಿದ್ದು, ಈ ದಂಪತಿಗೆ ಐದು ವರ್ಷದ ಮಗ ಇದ್ದಾನೆ. ರಶ್ಮಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತಿದ್ದಳು. ಇದು ಸಾವೋ ಆತ್ಮಹತ್ಯೆಯೋ ಎಂಬುದಿನ್ನೂ ಖಚಿತವಾಗಿಲ್ಲ. ಆದರೆ ಪತಿಯೇ ಪತ್ನಿಯನ್ನು ಕೊಲೆ ಮಾಡಿ ನೇತು ಹಾಕಿದ್ದಾನೆ ಎಂದು ರಶ್ಮಿ ಕುಟುಂಬಸ್ಥರು ಆರೋಪಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.