ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಜೀವನಾಧರಿತ ಕಥೆಯನ್ನು ಆಧರಿಸಿ ಸಿನಿಮಾಗಳನ್ನು ಮಾಡಲಾಗುತ್ತಿದೆ. ಇದೀಗ ರಾಮನವಮಿ ಹಬ್ಬದ ಶುಭ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಯೋಪಿಕ್‌ನ ಪೋಸ್ಟರ್ ರಿಲೀಸ್ ಆಗಿದೆ.
ಚಿತ್ರಕ್ಕೆ ‘ಲೀಡರ್ ರಾಮಯ್ಯ’ ಎಂದು ಹೆಸರಿಡಲಾಗಿದ್ದು, ಸಿದ್ದರಾಮಯ್ಯ ಅಭಿಮಾನಿ ಸಂಘದಿಂದ ಸಿನಿಮಾದ ಮೊದಲ ಪೋಸ್ಟರ್ನ್ನು ಸಿದ್ದರಾಮಯ್ಯ ನಿವಾಸದಲ್ಲಿ ಇಂದು(ಮಾ.30) ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಸಿದ್ದರಾಮಯ್ಯನವರ ಪಾತ್ರವನ್ನು ತಮಿಳಯ ನಟ ವಿಜಯ್ ಸೇತುಪತಿ ಮಾಡಲಿದ್ದಾರೆ. ಚಿತ್ರವನ್ನು ಸತ್ಯರತ್ನಂ ನಿರ್ದೇಶಿಸಲಿದ್ದಾರೆ. ಹಯಾತ್ ಫೀರ್ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
ಈ ಚಿತ್ರವನ್ನು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಿರ್ಮಾಣ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಲೀಡರ್ ರಾಮಯ್ಯ ಸಿನಿಮಾವು ಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರಲಿದೆ.
ಆಗಸ್ಟ್ 3ರಂದು ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬವಿದ್ದು, ಈ ದಿನವೇ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಪಾರ್ಟ್ 1 ಮತ್ತು ಪಾರ್ಟ್ 2 ಎರಡು ಭಾಗವಾಗಿ ಚಿತ್ರ ಬಿಡುಗಡೆಗೆ ಯೋಜನೆ ರೂಪಸಲಾಗಿದೆ. ಈ ಸಿನಿಮಾ ಅಂದಾಜು 30 ಕೋಟಿ ರೂ. ಬಜೆಟ್ ಆಗಲಿದೆ ಎಂದು ಲೀಡರ್ ರಾಮಯ್ಯ ಚಿತ್ರತಂಡ ಹೇಳಿಕೊಂಡಿದೆ.
ಲೀಡರ್ ರಾಮಯ್ಯ ಸಿನಿಮಾದ ನಿರ್ದೇಶಕ ಸತ್ಯರತ್ನಂ ಮಾತನಾಡಿ, ಲೀಡರ್ ರಾಮಯ್ಯ ಚಿತ್ರದಲ್ಲಿ ಲವ್ ಸ್ಟೋರಿಯೂ ಇದೆ. ಶೇ.70% ಸಿದ್ದರಾಮಯ್ಯ ಜೀವನ ಚರಿತ್ರೆಯನ್ನ ಒಳಗೊಂಡಿರುವ ಚಿತ್ರ ಇದಾಗಿದೆ. ಬಾಲ್ಯದ ಜೀವನ ಮತ್ತು ರಾಜಕೀಯಕ್ಕೆ ಎಂಟ್ರಿಯಾಗುವ ಅಂಶ ಸಿನಿಮಾದಲ್ಲಿದೆ. ಬಾಕಿ 30% ಲವ್ ಸ್ಟೋರಿ ಕುರಿತಾದ ಅಂಶ ಸಿನಿಮಾದಲ್ಲಿ ಇದೆ. ಕೆಲವೇ ದಿನಗಳಲ್ಲಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಲಿದೆ ಎಂದು ಹೇಳಿದ್ದಾರೆ.