ಕೌಜಲಗಿ: ‘ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯಾರ್ಹ. ಅವರ ಕೆಸಲಗಳಿಗೆ ಜನ ಸಹಕಾರ ನೀಡಬೇಕು’ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಕುಲಗೋಡ ಗ್ರಾಮದಲ್ಲಿ ₹1.32 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಕುಲಗೋಡ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದ ಗಡಿ ರಕ್ಷಣೆಗೆ ಹೋರಾಡುತ್ತಿರುವ ಸೈನಿಕರಂತೆ ಪೊಲೀಸರು ಸಹ ದಿನದ 24 ತಾಸು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.
‘ಕರ್ನಾಟಕದ ಪೊಲೀಸರು ಅಪರಾಧ ತಡೆಗಟ್ಟುವಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಅಪರಾಧ ಚಟುವಟಿಕೆಗಳಿಗೆ ಪೊಲೀಸರು ನಿಗಾವಹಿಸುತ್ತಿದ್ದಾರೆ’ ಎಂದರು.
‘ನಮ್ಮ ರಾಜ್ಯದಲ್ಲಿ ಗುಪ್ತಚರ ಇಲಾಖೆಯೂ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಆದ್ದರಿಂದ ಈ ಇಲಾಖೆಗೆ ಇನ್ನೂ ಹೆಚ್ಚಿನ ಅಧಿಕಾರ ನೀಡುವಂತೆಯೂ ಇದೇ ಸಂದರ್ಭದಲ್ಲಿ ಮನವಿ ಮಾಡಿದ ಅವರು, ಪೊಲೀಸರ ಬಗ್ಗೆ ಸಮಾಜದ ಗೌರವ, ಅಭಿಮಾನ ಇದೆ. ಪೊಲೀಸರು ಸಹ ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವಂತೆ’ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ವೇಣುಗೋಪಾಲ, ಜಿಲ್ಲಾ ಸಶಸ್ತ್ರ ಪಡೆಯ ವರಿಷ್ಠಾಧಿಕಾರಿ ಎಸ್.ವಿ. ಯಾದವ, ಪೊಲೀಸ್ ಉಪಾಧೀಕ್ಷಕ ಡಿ.ಎಚ್. ಮುಲ್ಲಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಾಸುದೇವ, ಕುಲಗೋಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ ಸಸಾಲಟ್ಟಿ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ, ಕುಲಗೋಡ ಪಿಎಸ್‌ಐ ಜಿ.ಎಸ್. ಪಾಟೀಲ, ಮೂಡಲಗಿ ಪಿಎಸ್‌ಐ ಸೋಮೇಶ ಗೆಜ್ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.