ಬೆಂಗಳೂರು :ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ನಾಯಕರ ನಿರಂತರ ಭೇಟಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯಿಂದ ಆಡಳಿತ ಬಿಜೆಪಿಯಲ್ಲಿ ಹೆಚ್ಚಿರುವ ಉತ್ಸಾಹಕ್ಕೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಅಡ್ಡಗಾಲಾಗಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿ, ಎರಡನೇ ಪಟ್ಟಿಗೆ ಬಿಡುಗಡೆಗೆ ತಯಾರಿ ನಡೆಸಿದೆ. ಪ್ರತಿಪಕ್ಷ ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿ ಮೊದಲ ಪಟ್ಟಿ ತ್ವರಿತವಾಗಿ ಘೋಷಿಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಸನ್ನದ್ಧವಾಗಿದೆ. ಆದರೆ ಬಿಜೆಪಿ ಪಾಳೆಯದಲ್ಲಿ ಮೇಲ್ನೋಟಕ್ಕೆ ಯಾವುದೇ ಸುಳಿವಿಲ್ಲ. ಆಂತರಿಕ ವಿಚಾರವಾಗಿ ಚಿಂತನ-ಮಂಥನ ನಡೆಸಿದೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಉದ್ದೇಶದಿಂದ ಮೂರನೇ ಸಮೀಕ್ಷೆ ಕಾರ್ಯವನ್ನೂ ಕೈಗೆತ್ತಿಕೊಂಡಿದೆ.
ಸಂಗ್ರಹಿಸಿದ ದತ್ತಾಂಶಗಳು, ಕ್ಷೇತ್ರಮಟ್ಟದ ಅಭಿಪ್ರಾಯಗಳು, ಸಮೀಕ್ಷೆ ವರದಿ ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಆ ಮೂಲಕ ಉಮೇದುವಾರಿಕೆ ಯಾರೊಬ್ಬರು ಅರ್ಜಿ, ಸ್ವಪರಿಚಯ ಪತ್ರ ಹಿಡಿದು ಕಚೇರಿಗೆ ಅಲೆಯುವ ಅಗತ್ಯವಿಲ್ಲವೆಂದು ಸೂಚ್ಯವಾಗಿ ತಿಳಿಸಿದ್ದಾರೆ. ಪಕ್ಷದ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ವರ್ಚಸ್ಸು ಉಳ್ಳವರು, ವಿವಿಧ ಆಯಾಮಗಳಿಂದ ಒಂದೇ ಹೆಸರು ಸೂಚಿತ ವಾದ 80 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಚುನಾವಣಾ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಿಸಿದ ನಂತರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
Laxmi News 24×7