ಬೆಳಗಾವಿ: ‘ಕೇವಲ ಭಾಷಣಗಳಲ್ಲಿ ಮಹಾ ಗ್ರಂಥಗಳಲ್ಲಿ ಮಹಿಳೆಯರಿಗೆ ಗೌರವ ನೀಡಿದರೆ ಸಾಲದು. ಪ್ರತಿಯೊಬ್ಬರು ತಮ್ಮ ಮನೆಯಲ್ಲಿರುವ ಹೆಣ್ಣುಮಕ್ಕಳ ಜೊತೆಗೆ ಸಮಾಜದ ಎಲ್ಲ ಮಹಿಳೆಯರನ್ನು ಸೋದರಿಯರಂತೆ ಕಾಣಬೇಕು’ ಎಂದು ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಞಕುಮಾರ ಹೆಳಿದರು.
ಕೇಂದ್ರ ಕಾರಾಗೃಹದಲ್ಲಿ ಬುಧವಾರ ‘ಅಂತರರಾಷ್ಟ್ರೀಯ ಮಹಿಳಾ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಣ್ಣು ತನ್ನ ಜೀವನದಲ್ಲಿ ಮಗುವಾಗಿ, ಮಗಳಾಗಿ, ಸಹೋದರಿಯಾಗಿ, ತಾಯಿಯಾಗಿ, ಹೀಗೆ ವಿವಿಧ ಸಂಬಂಧಗಳೊಂದಿಗೆ ಜೀವನ ಸಾಗಿಸುತ್ತಾಳೆ. ತಾಳ್ಮೆಯ ಪ್ರತಿ ರೂಪವೇ ಹೆಣ್ಣು. ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಹೆಣ್ಣು ಮಕ್ಕಳ ಶ್ರೇಯಸ್ಸಿಗಾಗಿ ದುಡಿದರು. ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು, ಉತ್ತಮ ಶಿಕ್ಷಣ ನೀಡುವುದು, ಮಹಿಳೆಯರ ಕೆಲಸದ ಕುರಿತು ಅನೇಕ ಅಂಶಗಳನ್ನು ಜಾರಿಗೆ ತಂದರು. ಆದರೆ, ಇಂದಿನ ಯುಗದಲ್ಲಿ ಇನ್ನೂ ಹೆಚ್ಚಿನ ಪ್ರಾತಿನಿಧ್ಯವನ್ನು ಮಹಿಳೆಯರಿಗೆ ನೀಡಬೇಕು’ ಎಂದರು
‘ಮಹಿಳೆಯರು ಯಾವುದೇ ಹಿಂಜರಿಕೆ ತೋರದೆ ಧೈರ್ಯದಿಂದ ಇರಬೇಕು. ಮಹಿಳಾ ದಿನಾಚರಣೆಯನ್ನು ಕೇವಲ ಒಂದು ದಿನ ಆಚರಿಸಿದರೆ ಸಾಲದು, ಪ್ರತಿ ದಿನ ಮಹಿಳೆಯರನ್ನು ಗೌರವದಿಂದ ಕಾಣಬೇಕು’ ಎಂದು ಹೇಳಿದರು.
ಕಾರಾಗೃಹ ನಿವಾಸಿಗಳ ಪರವಾಗಿ ಮಂಜುಳಾ ಹೊಂಗಲ್ ಮಾತನಾಡಿದರು. ಕಾರಾಗೃಹದ ಮಹಿಳಾ ಸಿಬ್ಬಂದಿ ಹಾಗೂ ಮಹಿಳಾ ಕೈದಿಗಳು ಭಾಗವಹಿಸಿದ್ದರು. ಸರ್ವರಿಗೂ ಸಿಹಿ ವಿತರಿಸಲಾಯಿತು.
ವೇದಿಕೆಯಲ್ಲಿ ಕಾರಾಗೃಹದ ಆಡಳಿತಾಧಿಕಾರಿ ಬಿ.ಎಸ್.ಪೂಜಾರಿ, ಸಹಾಯಕ ಅಧೀಕ್ಷಕ ಶಹಾಬುದ್ದಿನ್ ಕೆ. ಜೈಲರ್ ರಾಜೇಶ್ ಧರ್ಮಟ್ಟಿ, ಜಿ.ಆರ್. ಕಾಂಬಳೆ, ಉಪಾಧ್ಯಾಯ ಎಸ್.ಎಸ್.ಯಾದಗುಡೆ ಇದ್ದರು. ಮಹಿಳಾ ಖೈದಿಗಳಾದ ಈರವ್ವಾ ಹಾಗೂ ಮಂಜುಳಾ ಪ್ರಾರ್ಥಿಸಿದರು. ಶಶಿಕಾಂತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.