ಬೆಳಗಾವಿ: ಕುಂದಾನಗರಿ ಬೆಳಗಾವಿಗೆ ಸೋಮವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಅವರ ಅಭೂತಪೂರ್ವ ಸ್ವಾಗತಕ್ಕೆ ಇಡೀ ಜಿಲ್ಲೆಯ ಜನರು ಕಾತುರದಿಂದ ಕಾಯುತ್ತಿದ್ದಾರೆ.
ಕಮಲ ಪಾಳೆಯ ಹಬ್ಬೋಪಾದಿಯಲ್ಲಿ ಎಲ್ಲ ಸಿದ್ಧತೆ ಕೈಗೊಂಡಿದೆ. ನರೇಂದ್ರ ಮೋದಿ ಅವರ ಆಗಮನ ಹಿನ್ನೆಲೆಯಲ್ಲಿ ಬೆಳಗಾವಿ ನಗರಕ್ಕೆ ಮದುವಣಗಿತ್ತಿಯ ಕಳೆಬಂದಿದೆ.
ಮಧ್ಯಾಹ್ನ 2 ಗಂಟೆಗೆ ನಗರಕ್ಕೆ ಆಗಮಿಸುವ ಪ್ರಧಾನಿ ಅವರು ಇದೇ ಪ್ರಥಮ ಬಾರಿಗೆ ನಗರದಲ್ಲಿ ಆಯೋಜಿಸಲಾಗಿರುವ 10.45 ಕಿ.ಮೀ. ರೋಡ್ ಶೋ ದಲ್ಲಿ ಭಾಗವಹಿಸಿ ಜನರ ಸಂತಸದಲ್ಲಿ ಭಾಗಿಯಾಗಲಿದ್ದಾರೆ, ನಂತರ ಮುಖ್ಯ ವೇದಿಕೆಯಲ್ಲಿ ನಡೆಯುವ ಸಮಾರಂಭದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ನರೇಂದ್ರಸಿಂಗ್ ಥೋಮರ್, ಶೋಭಾ ಕರಂದ್ಲಾಜೆ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ, ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ.