ಬೈಲಹೊಂಗಲ: ಸಮೀಪದ ಹಾರೂಗೊಪ್ಪ ಗ್ರಾಮದ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ನವಿಲಿನ ಕಳಶ ಹೊತ್ತು ಆಕರ್ಷಕ ರಥವನ್ನು ಭಕ್ತರು ಹುಮ್ಮಸ್ಸಿನಿಂದ ಎಳೆದರು.
ಭಕ್ತರು ಹರಹರ ಮಹಾದೇವ, ಉಳವಿ ಚನ್ನಬಸವೇಶ್ವರ ಮಹರಾಜಕೀ ಜೈ ಎನ್ನುತ್ತ ರಥ ಎಳೆದರು. ಸುತ್ತಲಿನ ಗ್ರಾಮಗಳಿಂದ ಬಂದ ಜನ ಹೂವು, ಹಣ್ಣು, ಕಾರೀಕ್‌ಗಳನ್ನು ರಥಕ್ಕ ಎಸೆದರು.
ದೇವಸ್ಥಾನದಲ್ಲಿ ಉಳವಿ ಚನ್ನಬಸವೇಶ್ವರ, ನಂದಿ ಮೂರ್ತಿಗಳಿಗೆ ವಿಶೇಷ ಪೂಜೆ, ಮಹಾಭಿಷೇಕ, ಆನೆ, ಕುಂಭಮೇಳ, ಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಇಡೀ ದಿನ ನಡೆದವು. ಅರಭಾವಿ ಪುಣ್ಯಾರಣ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಕಲ್ಯಾಣ ಕ್ರಾಂತಿಯ ನಂತರ ಚನ್ನಬಸವೇಶ್ವರರು ವಚನ ಸಾಹಿತ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಉಳವಿಯತ್ತ ಧಾವಿಸಿದರು. ಪಾದಯಾತ್ರೆ ಮೂಲಕ ಬಂದ ಶರಣ- ಶರಣೆಯರು ಕೆಲ ಸಮಯ ಮಾರ್ಗದಲ್ಲಿ ಹಾರೂಗೊಪ್ಪ ಗ್ರಾಮದಲ್ಲಿ ವಿಶ್ರಾಂತಿ ಪಡೆದರು. ಲಿಂಗಪೂಜೆಗಳನ್ನು ಮಾಡಿದರು. ಅದರ ಸ್ಮರಣಾರ್ಥ ಚಿಕ್ಕ ದೇವಸ್ಥಾನವನ್ನು ಇಲ್ಲಿ ನಿರ್ಮಿಸಲಾಗಿದೆ. ಊರಿನ ಭಕ್ತರು ಅದನ್ನು ಕಾಲಕಾಲಕ್ಕೆ ಅಭಿವೃದ್ಧಿ ಮಾಡುತ್ತ ಬಂದಿದ್ದಾರೆ. ಕಳೆದ 18 ವರ್ಷಗಳಿಂದ ಇದರ ಅದ್ಧೂರಿ ಜಾತ್ರೆ ಕೂಡ ನಡೆಯುತ್ತ ಬಂದಿದೆ.