Breaking News

ಸವದತ್ತಿ: ಯಲ್ಲಮ್ಮನ ಗುಡ್ಡದಲ್ಲಿ ಭಾರತ ಹುಣ್ಣಿಮೆ ಸಡಗರ

Spread the love

ವದತ್ತಿ: ಇಲ್ಲಿನ ಯಲ್ಲಮ್ಮನಗುಡ್ಡದ ಭಾರತ ಹುಣ್ಣಿಮೆ ಜಾತ್ರೆ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧ. ಐತಿಹಾಸಿಕ, ಪೌರಾಣಿಕ ಹಾಗೂ ಜನಪದೀಯ ಸಂಸ್ಕೃತಿಯ ತ್ರಿವೇಣಿ ಸಂಗಮವಾಗಿರುವ ಈ ನೆಲದಲ್ಲಿ ಭಾನುವಾರ (ಫೆ.5) ಅದ್ದೂರಿ ಜಾತ್ರೆ ಜರುಗಲಿದ್ದು ‘ಸಪ್ತ ಕೊಳ್ಳಗಳ ನಾಡು’ ಸಂಭ್ರಮದಲ್ಲಿ ಮುಳುಗಿದೆ.

 

ಎತ್ತ ಕಣ್ಣು ಹಾಯಿಸಿದರೂ ಜನಸಾಗರ, ಕಣ್ಮನ ಸೆಳೆಯುತ್ತಿರುವ ಚಕ್ಕಡಿಗಳ ಸಾಲು, ಭಕ್ತರನ್ನು ರಂಜಿಸುತ್ತಿರುವ ಜೋಗತಿಯರ ಚೌಡಕಿ ನಿನಾದ ಹೀಗೆ. ಹಲವು ವಿಶೇಷಗಳ ಮೂಲಕ ಜಾತ್ರೆ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ‘ಉಧೋ ಉಧೋ ಯಲ್ಲಮ್ಮ ನಿನ್ನ ಹಾಲ್‌ಖುಧೋ…’ ಎಂಬ ಜೈಕಾರ ಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿದೆ.

ಮಹಾರಾಷ್ಟ್ರದ ಭಕ್ತರೇ ಅಧಿಕ: ‘ಎಲ್ಲರ ಅಮ್ಮ’ ಯಲ್ಲಮ್ಮ ದೇವಿಗೆ ಕರ್ನಾಟಕ ಮಾತ್ರವಲ್ಲದೆ; ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲೂ ಲಕ್ಷಾಂತರ ಭಕ್ತರಿದ್ದಾರೆ. ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಹಾಗೂ ಸಂಕಷ್ಟಗಳನ್ನು ಪರಿಹರಿಸುವ ದೈವೀಶಕ್ತಿಯಾಗಿ ದೇವಿ ಭಕ್ತರ ಮನದಲ್ಲಿ ನೆಲೆಸಿದ್ದಾಳೆ. ಹೀಗಾಗಿ ಜಾತ್ರೆ ಮುನ್ನಾದಿನವಾದ ಶನಿವಾರದಿಂದಲೇ ಸಾಗರೋಪಾದಿಯಲ್ಲಿ ಭಕ್ತರು ಯಲ್ಲಮ್ಮನ ಸನ್ನಿಧಿಯತ್ತ ಮುಖಮಾಡಿದ್ದು, ಮಲಪ್ರಭೆ ಮಡಿಲಲ್ಲಿ ಭಕ್ತಿಯ ಹೊಳೆ ಹರಿಯುತ್ತಿದೆ. ಮಹಾರಾಷ್ಟ್ರದಿಂದಲೇ ಹೆಚ್ಚಿನ ಭಕ್ತರು ಆಗಮಿಸುತ್ತಿರುವುದು ವಿಶೇಷ.

ಸಿ.ಸಿ ಕ್ಯಾಮೆರಾ ನಿಗಾ: ‘ಭರತ ಹುಣ್ಣಿಮೆ ಜಾತ್ರೆಗೆ 20 ಲಕ್ಷಕ್ಕಿಂತ ಅಧಿಕ ಭಕ್ತರು ಬರುವ ನಿರೀಕ್ಷೆಯಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಯಲ್ಲಮ್ಮ ದೇವಸ್ಥಾನ ಪ್ರಾಂಗಣ, ಎಣ್ಣೆ ಹೊಂಡ ಮತ್ತು ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ 40 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗ್ಯಾಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

80 ವರ್ಷಗಳಿಂದ ಬರುತ್ತಿದ್ದೇವೆ: ‘ಕಳೆದ 80 ವರ್ಷಗಳಿಂದ ನಾವು ಚಕ್ಕಡಿಯಲ್ಲೇ ಯಲ್ಲಮ್ಮನಗುಡ್ಡಕ್ಕೆ ಬರುತ್ತಿದ್ದೇವೆ. ಈ ಬಾರಿ 23 ಚಕ್ಕಡಿ, ನಾಲ್ಕು ಟ್ರ್ಯಾಕ್ಟರ್‌ಗಳಲ್ಲಿ 100ಕ್ಕೂ ಅಧಿಕ ಮಂದಿ ಬಂದಿದ್ದೇವೆ. ದೇವಿ ನಮ್ಮೆಲ್ಲ ಇಷ್ಟಾರ್ಥ ಈಡೇರಿಸಿದ್ದರಿಂದ ಬದುಕು ಸಮೃದ್ಧವಾಗಿದೆ’ ಎಂದು ಮಹಾರಾಷ್ಟ್ರದ ಇಚಲಕರಂಜಿಯ ವಿಜಯ ಗೋಲಂಗಡೆ, ರಾಹುಲ್ ಲಂಗೋಟಿ, ಸುಭಾಷ ಲಂಗೋಟಿ ‘ಪ್ರಜಾವಾಣಿಗೆ ತಿಳಿಸಿದರು.

ಕಾಗವಾಡ ತಾಲ್ಲೂಕಿನ ಮಂಗಸೂಳಿಯ ಭಕ್ತರಾದ ಸದಾಶಿವ ಮಗದುಮ್ಮ, ಓಂಕಾರ ಮಗದುಮ್ಮ, ‘ಮೂರು ವರ್ಷಕ್ಕೊಮ್ಮೆ ಚಕ್ಕಡಿಯಲ್ಲೇ ಯಲ್ಲಮ್ಮನಗುಡ್ಡಕ್ಕೆ ಬರುತ್ತೇವೆ. ದೇವಿ ನಾಮಸ್ಮರಣೆಯೊಂದಿಗೆ 11 ದಿನಗಳ ಯಾತ್ರೆ ಪೂರ್ಣಗೊಳಿಸುತ್ತೇವೆ. ಬಂಡಿಗಳಲ್ಲಿ ಬರುವುದರಲ್ಲಿ ಸಿಗುವ ಖುಷಿ ಬೇರೆಲ್ಲೂ ಸಿಗದು’ ಎಂದರು.

ಭರ್ಜರಿ ಬಳೆ ವ್ಯಾಪಾರ: ‘ಭಾರತ ಹುಣ್ಣಿಮೆಗೆ ಮುತ್ತೈದೆ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ಈ ಜಾತ್ರೆಗೆ ಬರುವ ಎಲ್ಲ ಮಹಿಳೆಯರು ಹಸಿರು ಬಳೆ ಧರಿಸುವ ಪರಂಪರೆ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಗುಡ್ಡದಲ್ಲಿರುವ 60ಕ್ಕೂ ಅಧಿಕ ಬಳೆ ಅಂಗಡಿಗಳಲ್ಲಿ ಇದೊಂದೇ ಜಾತ್ರೆಯಲ್ಲಿ ದೊಡ್ಡ ಮೊತ್ತದ ವಹಿವಾಟು ನಡೆಯುತ್ತದೆ. ಈ ಜಾತ್ರೆಯನ್ನೇ ನಂಬಿ ಬದುಕು ಕಟ್ಟಿಕೊಂಡ ಹಲವು ಬಳೆಗಾರರ ಕುಟುಂಬಗಳು ಇಲ್ಲಿವೆ’ ಎನ್ನುತ್ತಾರೆ ಉಗರಗೋಳದ ಬಳೆ ವ್ಯಾಪಾರಸ್ಥ ಪ್ರಕಾಶ ಗೋಂಗಡೆ.

*

ಮೌಢ್ಯ ವಿರೋಧಿ ಜಾಗೃತಿ

ಬಸವರಾಜ ಶಿರಸಂಗಿ

ಸವದತ್ತಿ: ಒಂದೆಡೆ ಸಾವಿರಾರು ಭಕ್ತರು ಯಲ್ಲಮ್ಮನ ಸನ್ನಿಧಿಗೆ ಬಂದು ದೇವಿಗೆ ಭಕ್ತಿ ಸಮರ್ಪಿಸುತ್ತಿದ್ದರೆ, ಮತ್ತೊಂದೆಡೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮೂಢನಂಬಿಕೆ ವಿರೋಧಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಸವದತ್ತಿ, ರಾಮದುರ್ಗ, ಬೈಲಹೊಂಗಲ ತಾಲ್ಲೂಕುಗಳಿಂದ ಬಂದಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಜೋಗತಿಯರು ಇರುವ ಕಡೆಗೆ ಹೋಗಿ, ‘ಎಲ್ಲರೂ ಶ್ರದ್ಧೆಯಿಂದ ಧಾರ್ಮಿಕ ಆಚರಣೆ ಕೈಗೊಳ್ಳಿ. ಆದರೆ, ಮೌಢ್ಯದತ್ತ ಹೆಜ್ಜೆ ಇರಿಸಬೇಡಿ’ ಎಂದು ತಿಳಿವಳಿಕೆ ಮೂಡಿಸುತ್ತಿದ್ದಾರೆ. ಬೀದಿನಾಟಕ ಪ್ರದರ್ಶಿಸುತ್ತಿದ್ದಾರೆ.

‘ಈ ಹಿಂದೆ ಯಲ್ಲಮ್ಮನಗುಡ್ಡದಲ್ಲಿ ಮುತ್ತು ಕಟ್ಟುವ ಪದ್ಧತಿಯಿತ್ತು. ಹಲವು ವರ್ಷಗಳ ಹಿಂದೆಯೇ ಅದು ನಿರ್ಮೂಲನೆಯಾಗಿದೆ. ಆದರೆ, ಅಂತಹ ಪದ್ಧತಿ ಮತ್ತೆ ಆರಂಭವಾಗದಿರಲಿ ಎಂಬ ಕಾರಣಕ್ಕೆ ಪ್ರತಿವರ್ಷ ಬನದ ಹುಣ್ಣಿಮೆ ಹಾಗೂ ಭರತ ಹುಣ್ಣಿಮೆ ಜಾತ್ರೆಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಇದಕ್ಕೆ ಭಕ್ತರು ಸಹಕರಿಸುತ್ತಿದ್ದಾರೆ’ ಎಂದು ಸವದತ್ತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾಂಚನಾ ಅಮಟೆ ‘ಪ್ರಜಾವಾಣಿ’ಗೆ ತಿಳಿಸಿದರು.

ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಮೂಢನಂಬಿಕೆ ವಿರೋಧಿಸುವ ಬಗ್ಗೆ ಜಾಗೃತಿ ಫಲಕಗಳನ್ನು ಅಳವಡಿಸಿದ್ದಾರೆ. ಸಾವಿರಾರು ಭಕ್ತರಿಗೆ ಕರಪತ್ರಗಳನ್ನು ಹಂಚುತ್ತಿದ್ದಾರೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ