ಉಳ್ಳಾಗಡ್ಡಿ ಖಾನಾಪೂರ/ಯಮಕನಮರಡಿ: ನಮ್ಮ ದೇಶ ಮೂಢ ನಂಬಿಕೆಗಳ ದೇಶವಲ್ಲ, ಮೂಲ ನಂಬಿಕೆಗಳ ದೇಶ. ಇಂದು ನಮ್ಮ ಭಾರತೀಯ ಸಂಸ್ಕೃತಿಯನ್ನು ವಿದೇಶಿಯರು ಅಧ್ಯಯನ ಮಾಡುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಭಾರತ ಜೋಡೋ ಬದಲು ಭಾರತ ತೋಡೋ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ರವಿವಾರ ಜ. 29 ರಂದು ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮದಲ್ಲಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜ ವಿರೋಧಿಯಾಗಿರುವ ಶಾಸಕ ಸತೀಶ ಜಾರಕಿಹೊಳಿಯವರು ಒಳ ಒಪ್ಪಂದ ಮಾಡಿಕೊಳ್ಳುವಲ್ಲಿ ನಿಪುಣರು. ತಾಕತ್ತಿದ್ದರೆ ಅವರು ಈ ಬಾರಿ ಹಿಂದೂಗಳ ಮತ ಬೇಡ ಎಂದು ಘೋಷಿಸಿ ಚುನಾವಣೆಗೆ ಸ್ಪರ್ಧಿಸಲಿ. ಈ ಬಾರಿ ಸತೀಶ ಜಾರಕಿಹೊಳಿಯವರಿಗೆ ಹಿಂದೂ ಸಮಾಜ ತಕ್ಕ ಪಾಠ ಕಲಿಸಲು ಸಿದ್ಧವಿದೆ. ಅವರನ್ನು ಈ ಬಾರಿ ಮನೆಗೆ ಕಳುಹಿಸಿ ಕೊಡುತ್ತೇವೆ.
ಕ್ಷೇತ್ರದಲ್ಲಿ ಗೂಂಡಾಗಿರಿ ರಾಜಕಾರಣ ಮಾಡುತ್ತಿರುವ ಶಾಸಕರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಯಮಕನಮರಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಟೀಕಿಸಿದರು. ದೇಶದಲ್ಲಿಂದು ಬಿಜೆಪಿ ಸರಕಾರ ಬಂದ ನಂತರ ಶಾಂತಿಯ ವಾತಾವರಣ ನಿರ್ಮಾಣವಾಗಿದೆ.
ಕಾಂಗ್ರೆಸ್ ಕಾಲಾವಧಿಯಲ್ಲಿ ಭಾರತ ಹಾವಾಡಿಗರ, ಭಿಕ್ಷುಕರ ದೇಶ ಎನಿಸಿಕೊಂಡಿತ್ತು. ಕಾಂಗ್ರೆಸ್ ಸರಕಾರ ಕಾಶ್ಮೀರ ಮತ್ತು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಮನಸ್ಸು ಮಾಡಿರಲಿಲ್ಲ. ಆದರೆ ಬಿಜೆಪಿ ಸರಕಾರ ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಿ, ಅಲ್ಲಿ ಶಾಂತಿ ನೆಲೆಸುವಂತೆ ಮಾಡಿದೆ ಎಂದರು.
ಸಿದ್ದರಾಮಯ್ಯನವರಿಗೆ ಯಾವ ಕ್ಷೇತ್ರದಲ್ಲೂ ನಿಲ್ಲುವ ತಾಕತ್ತಿಲ್ಲ, ಅವರು ಕ್ಷೇತ್ರ ಹುಡುಕುತ್ತಿದ್ದಾರೆ. ಅಧಿ ಕಾರವನ್ನು ಕಳೆದುಕೊಂಡ ಅವರು ಹುಚ್ಚರಂತೆ ವರ್ತಿಸುತ್ತಿದ್ದಾರೆಂದು ಖಾರವಾಗಿ ನುಡಿದ ನಳಿನಕುಮಾರ ಕಟೀಲ್, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮೂರು ಗುಂಪುಗಳಾಗಿವೆ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಎಂದು ವ್ಯಂಗ್ಯವಾಡಿದರು.
ಬಸ್ಸಾಪೂರ ಗ್ರಾಮದ ಶ್ರೀಲಕ್ಷ್ಮೀದೇವಿಯ ದರ್ಶನ ಪಡೆದ ನಳಿನಕುಮಾರ ಕಟೀಲ್, ಗ್ರಾಮದಲ್ಲಿ ಬೂತ್ ವಿಜಯ ಅಭಿಯಾನ ಹಾಗೂ ವಿಜಯ ಸಂಕಲ್ಪ ಯಾತ್ರೆಯ ಭಿತ್ತಿ ಪತ್ರ-ಕರಪತ್ರಗಳನ್ನು ಹಚ್ಚಿ ಚಾಲನೆ ನೀಡಿದರು.
Laxmi News 24×7