ಬೆಳಗಾವಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಬೆಳಗಾವಿಯಲ್ಲಿಯೂ ಧರ್ಮ ದಂಗಲ್ ಶುರುವಾಗಿದ್ದು, ಇಲ್ಲಿಯ ಸಾರಥಿ ನಗರದಲ್ಲಿ ವಸತಿ ನಿವೇಶನಕ್ಕೆ ಅನುಮತಿ ಪಡೆದು ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಈ ಅನ ಧಿಕೃತ ಮಸೀದಿ ತೆರವಿಗೆ ಪಟ್ಟು ಹಿಡಿದಿವೆ.
ಬೆಳಗಾವಿ ಗ್ರಾಮಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಾರಥಿ ನಗರದಲ್ಲಿ ಕರ್ನಾಟಕ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ಖಾಸಗಿ ಲೇಔಟ್ ನಿರ್ಮಿಸಲಾಗಿದೆ. ನಿವೇಶನ ಸಂಖ್ಯೆ 19ನ್ನು ಮೂಲ ಮಾಲೀಕರು ಮೌಲಾನಾ ಅಬ್ದುಲ್ ಕಲಾಂ ಎಜ್ಯುಕೇಶನಲ್ ಹಾಗೂ ಚಾರಿಟೇಬಲ್ ಸೊಸೈಟಿಗೆ ಕೊಡುಗೆಯಾಗಿ ನೀಡಿದ್ದು, ಇಲ್ಲಿ ಫಾತಿಮಾ ಮಸೀದಿ ನಿರ್ಮಿಸಲಾಗಿದೆ.
ನಿವೇಶನ ಸ್ಥಳದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದ್ದು, ಇದನ್ನು ತೆರವುಗೊಳಿಸುವಂತೆ ಸ್ಥಳೀಯರು ಕೆಲ ತಿಂಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರಿಗೂ ದೂರು ನೀಡಿದ್ದಾರೆ. ಅಕ್ರಮವಾಗಿರುವ ಮಸೀದಿಯನ್ನು ತೆರವುಗೊಳಿಸುವುದಾಗಿ ಆಯುಕ್ತರು ಮೌಖಿಕವಾಗಿ ಭರವಸೆ ನೀಡಿ ಕಳುಹಿಸಿದ್ದರು.
ಹೊಸ ವಿವಾದ ಸೃಷ್ಟಿ: ದಿನದಿಂದ ದಿನಕ್ಕೆ ಈ ವಿವಾದ ಬೆಳಗಾವಿಯಲ್ಲಿ ತಾರಕಕ್ಕೇರುತ್ತಿದ್ದು, ಜಿಲ್ಲಾಡಳಿತ ಮಸೀದಿ ತೆರವುಗೊಳಿಸದಿದ್ದರೆ ನಾವೇ ಸ್ವತಃ ಅಲ್ಲಿಗೆ ನುಗ್ಗಿ ನೆಲಸಮಗೊಳಿಸುವುದಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬೆಳಗಾವಿಯಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ.