ಬೆಳಗಾವಿ: ಇಲ್ಲಿನ ಕಾಂಗ್ರೆಸ್ ರಸ್ತೆಯಲ್ಲಿರುವ ವೀರಸೌಧದ ಆವರಣದಲ್ಲಿ ಬುಧವಾರ, ಕಾಂಗ್ರೆಸ್ ‘ಪ್ರಜಾಧ್ವನಿ’ ಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಚಾಲನೆ ನೀಡಿದರು.
‘ಬಿಜೆಪಿ ಪಾಪದ ಕೊಳೆ’ ತೊಳೆಯುವ ಸಂಕೇತವಾಗಿ ಎಲ್ಲ ನಾಯಕರೂ ಪೊರಕೆ ಹಿಡಿದು, ನೀರು ಹಾಕಿ ರಸ್ತೆಯಲ್ಲಿ ಗುಡಿಸಿದರು.
1924ರಲ್ಲಿ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನದ ನಡೆದಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸಿಕೊಂಡ ಏಕಮಾತ್ರ ಅಧಿವೇಶನವದು. ಅದರ ನೆನಪಿಗಾಗಿ ವೀರಸೌಧ ನಿರ್ಮಿಸಲಾಗಿದೆ. ಐತಹಾಸಿಕ ಮಹತ್ವ ಪಡೆದ ಈ ಸ್ಥಳದಿಂದಲೇ ಕೆಪಿಸಿಸಿ ‘ಪ್ರಜಾಧ್ವನಿ’ ಯಾತ್ರೆ ಆರಂಭಿಸಿತು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮುಂದಾಳತ್ವದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ, ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಬಸವರಾಜ ರಾಯರೆಡ್ಡಿ, ಪಿ.ಟಿ.ಪರಮೇಶ್ವರ ನಾಯಕ, ಆರ್.ವಿ.ದೇಶಪಾಂಡೆ, ವಿನಯ ಕುಲಕರ್ಣಿ, ಡಿ.ಬಿ.ಇನಾಮದಾರ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಅಂಜಲಿ ನಿಂಬಾಳ್ಕರ್, ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ಕೌಜಲಗಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ಇತರರು ಬಸ್ ಏರಿದರು.
* ಸರ್ಕಾರ ಓಡಿಸಲು ರೂಪುರೇಷೆ:
‘ದೇಶವನ್ನು ದಾಸ್ಯದಿಂದ ಬಿಡುಗಡೆ ಮಾಡಿಸಲು ಮಹಾತ್ಮ ಗಾಂಧಿ ಅವರು ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ದರು. ಬ್ರಿಟಿಷರನ್ನು ದೇಶದಿಂದ ಓಡಿಸಲು ಇಲ್ಲೇ ರೂಪುರೇಷೆ ಸಿದ್ಧಪಡಿಸಿದ್ದರು. ಅದೇ ರೀತಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಓಡಿಸಲು ನಾವು ತಯಾರಾಗಿದ್ದೇವೆ’ ಎಂದು ಡಿ.ಕೆ.ಶಿವಕುಮಾರ ಗುಡುಗಿದರು.