ಬೆಳಗಾವಿ: ‘ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ, ವೃತ್ತಿ ಅನುಭವಗಳನ್ನು ಹೊಸ ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ಸುಸ್ಥಿರ ಸಮಾಜ ನಿರ್ಮಾಣಕ್ಕೆ ಇದೇ ಮೊದಲ ಹೆಜ್ಜೆ’ ಎಂದು ನಿವೃತ್ತ ಮುಖ್ಯಶಿಕ್ಷಕ ವೈ.ಎಂ.ಕಾಮಕರ ಕಿವಿಮಾತು ಹೇಳಿದರು.
ಇಲ್ಲಿನ ಫುಲಬಾಗ್ ಗಲ್ಲಿಯಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ-ನಂಬರ್ 7ರಲ್ಲಿ ಭಾನುವಾರ ನಡೆದ, 1994ರಿಂದ 2000ರವರೆಗಿನ ವಿದ್ಯಾರ್ಥಿಗಳ ಒಕ್ಕೂಟದಿಂದ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಹಳೆಯ ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ಹಾಗೂ ಸಾಮಾಜಿಕ ನೈತಿಕತೆ ಬಗ್ಗೆ ಹೆಚ್ಚು ಕಾಳಜಿ ಇತ್ತು. ಬದಲಾದ ಕಾಲಘಟ್ಟದಲ್ಲಿ ಇವು ಮಾಯವಾಗುತ್ತಿವೆ. ಹಳೆಯ ಬೇರು- ಹೊಸಚಿಗುರು ಒಂದಾಗಿ ಮತ್ತೆ ಮೌಲ್ಯಗಳನ್ನು ಎತ್ತಿಹಿಡಿಬೇಕು. ನಮ್ಮಿಂದ ಶಿಕ್ಷಣ ಪಡೆದವರು ಇಂದು ಸಮಾಜದ ದೊಡ್ಡದೊಡ್ಡ ಹುದ್ದೆಗಳಲ್ಲಿ ಇದ್ದಾರೆ ಎನ್ನುವುದು ಗುರುವಿಗೆ ಸಿಗುವ ದೊಡ್ಡ ಗೌರವ’ ಎಂದರು.
ಸಹಶಿಕ್ಷಕ ನದಾಫ ಮಾತನಾಡಿ, ‘ಶಾಲೆಯ ಜೀರ್ಣೋದ್ಧಾರ ಹಾಗೂ ಹೊಸ ಕಟ್ಟಡಕ್ಕೆ ಧನಸಹಾಯ ನೀಡಿ ಏಳಿಗೆಗೆ ನೆರವಾಗಬೇಕು’ ಎಂದು ಕೋರಿದರು.
ಸಹ ಶಿಕ್ಷಕರಾದ ಸುಹಾಸಿನಿ ಮರಡಿ, ಹಿರೋಜಿ, ನಿಟ್ಟೂರಕರ್, ಮರಡಿ, ನದಾಫ, ನೀತಾ ಮುರಡಿಮಠ, ಉಗಾರ, ಭಸ್ಮೆ, ಚಿಕ್ಕಮಠ, ಬೆಲ್ಲದ ಅವರನ್ನು ಹಳೆಯ ವಿದ್ಯಾರ್ಥಿಗಳ ಒಕ್ಕೂಟದಿಂದ ಸನ್ಮಾನಿಸಲಾಯಿತು.
ಹಳೆಯ ವಿದ್ಯಾರ್ಥಿನಿ ಗೀತಾ ಸು. ದಯಣ್ಣವರ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ಮಂತುರಗಿಮಠ ಸ್ವಾಗತಿಸಿದರು. ದೀಪಾ ಅರವಳ್ಳಿ ವಂದಿಸಿದರು. ರಾಜು ಬೆಲ್ಲದ ನೇತೃತ್ವದಲ್ಲಿ ಹಲವು ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮ ಸಿದ್ಧತೆ ಮಾಡಿದರು. ತಮ್ಮ ಸವಿನೆನಪುಗಳನ್ನು ಮೆಲಕು ಹಾಕಿದರು. ಬಾಲ್ಯದ ಆಟಗಳನ್ನು ಆಡಿ ನಕ್ಕು ನಲಿದರು.