ಬೆಳಗಾವಿ: ನೂತನ ಪಿಂಚಣಿ ಯೋಜನೆ ರದ್ದತಿಗಾಗಿ ನಡೆಯುತ್ತಿರುವ ಹೋರಾಟ ವಿಧಾನಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿ ಕೆಲಕಾಲ ವಾತಾವರಣವನ್ನು ಕಾವೇರಿಸಿತು. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಚರ್ಚೆಗೆ ಅವಕಾಶ ಕಲ್ಪಿಸಬೇಕು ಹಾಗೂ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪಟ್ಟು ಹಿಡಿದರು.
ಸಾವಿರಾರು ಮಂದಿ ನೌಕರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಆಡಳಿತ ವ್ಯವಸ್ಥೆಯೂ ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಯವರು ಧರಣಿ ನಿರತರ ಜತೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಇದೊಂದು ಗಂಭೀರ ವಿಷಯ. ಸರಕಾರವು ಸರಕಾರಿ ನೌಕರರ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ಅನ್ಯಾಯವಾಗಲು ಅವಕಾಶ ಕಲ್ಪಿಸಿಲ್ಲ. ತುಟ್ಟಿಭತ್ತೆ ಸೇರಿದಂತೆ ಹಲವು ಸೌಲಭ್ಯ ತತ್‌ಕ್ಷಣವೇ ನೀಡಿದೆ. ಏಳನೇ ವೇತನ ಆಯೋಗ ಶಿಫಾರಸು ಕುರಿತೂ ಸಮಿತಿ ಸಹ ರಚಿಸಿದೆ ಎಂದು ಹೇಳಿದರು.