2023 ವಿಧಾನಸಭೆ ಚುನಾವಣೆಗಳ ವರ್ಷ. 2024ರ ಮಹಾ ಚುನಾವಣೆಗೆ ಇದು ಸೆಮಿಫೈನಲ್. ಇದೇ ಹೆಚ್ಚು ರೋಚಕವಾಗಿದೆ. ಬಿಜೆಪಿಯ ತ್ರಿಮೂರ್ತಿಗಳು ಹಾಗೂ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ
ಈ ಸೆಮಿಫೈನಲ್ ಮಹಾ ಸವಾಲು. ಕೈಯಲ್ಲಿದ್ದ ಪಕ್ಷಿಗಳನ್ನು ಉಳಿಸಿಕೊಂಡೇ ಮತ್ತಷ್ಟು ಹಕ್ಕಿಗಳಿಗೆ ಪಂಜರ ಹೊಂದಿಸಬೇಕಾದ ಅನಿವಾರ್ಯತೆ.
ಖರ್ಗೆಯವರಿಗಂತೂ ತಮ್ಮ ತವರಿನಲ್ಲೇ ವಿಜಯ ಧ್ವಜ ನೆಡುವಂಥ ಬೆಟ್ಟದಂಥ ಸವಾಲಿದೆ. ದಿಲ್ಲಿಯ ಕಡೆಗಿನ ಈ ಪಯಣದಲ್ಲಿ ಎಷ್ಟು ದೂರದವರೆಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಗೆಲುವಿನ ಬುತ್ತಿ ಬರುವುದೋ ಎಂಬುದನ್ನೂ ಕಾದು ನೋಡಬೇಕಿದೆ.
ಮೊನ್ನೆಯಷ್ಟೇ ಒಂದು ಆಟ ಮುಗಿದಿದೆ. ಅದು ಲೀಗೋ, ಕ್ವಾರ್ಟರ್ ಫೈನಲೋ, ಸೆಮಿ ಫೈನಲೋ ಎಂಬುದು ಆಯಾ ಪಕ್ಷಗಳ ಲೆಕ್ಕಾಚಾರಕ್ಕೆ ಬಿಟ್ಟಿದ್ದು. ಒಟ್ಟಿನಲ್ಲಿ ಪಂದ್ಯವೊಂದು ಮುಗಿದಿದೆ. ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯನ್ನು ವಿಪಕ್ಷ ಸ್ಥಾನಕ್ಕೆ ತಳ್ಳಿ ಕಾಂಗ್ರೆಸ್ ಅಧಿಕಾರಕ್ಕೇರಿದೆ.
ಹಾಗೆ ಹೇಳುವುದಾದರೆ 2023 ನಿಜಕ್ಕೂ ಸೆಮಿಫೈನಲ್. 2024ರ ಗ್ರ್ಯಾಂಡ್‌ಫೈನಲ್‌ನ ಮುನ್ನ 10 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ. ಫೆಬ್ರವರಿಯಲ್ಲಿ ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಮೇ ತಿಂಗಳಲ್ಲಿ ಕರ್ನಾಟಕ, ನವೆಂಬರ್‌ನಲ್ಲಿ ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ಡಿಸೆಂಬರ್‌ನಲ್ಲಿ ರಾಜಸ್ಥಾನ, ತೆಲಂಗಾಣದಲ್ಲಿ ಚುನಾವಣೆ ನಡೆಯಬೇಕು. ಇದೇ ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲೂ ರಾಷ್ಟ್ರಪತಿ ಆಡಳಿತದ ಕಾಲ ಮುಗಿಯುವ ಕಾರಣ ಅಲ್ಲಿಯೂ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಇವೆಲ್ಲದರ ಫಲಿತಾಂಶ ಫೈನಲ್‌ನ ದಿಕ್ಕುದಿಸೆಯನ್ನು ನಿರ್ಧರಿಸದಿರದು. ಒಂದುವೇಳೆ ಈಶಾನ್ಯ ಭಾರತದ ನಾಲ್ಕು ರಾಜ್ಯಗಳಾದ ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ ವಿಧಾನಸಭೆಗಳ ಚುನಾವಣೆ ಫಲಿತಾಂಶ ದೊಡ್ಡ ಪರಿಣಾಮ ಬೀರಲಾರದು ಎಂದರೂ ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕದ ಫಲಿತಾಂಶ ಬಹಳ ಮಹತ್ವದ್ದು. ಛತ್ತೀಸ್‌ಗಢ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ ಉಳಿದ ರಾಜ್ಯಗಳು. ಅದಕ್ಕೇ ಇದು ಸೆಮಿಫೈನಲ್.
ಕರ್ನಾಟಕ, ಮಧ್ಯಪ್ರದೇಶ, ತ್ರಿಪುರಾಗಳಲ್ಲಿ ಪ್ರಸ್ತುತ ಬಿಜೆಪಿಯದ್ದೇ ಸರಕಾರವಿದೆ.