ವಿಜಯಪುರ : ಆರ್ಥಿಕ ಸಂಕಷ್ಟದಿಂದ ವೈದ್ಯಕೀಯ ಪ್ರವೇಶ ಸಿಕ್ಕರೂ ಪ್ರವೇಶ ಪಡೆಯಲಾಗದ ಮತ್ತೋರ್ವ ವಿದ್ಯಾರ್ಥಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರ್ಥಿಕ ನೆರವು ನೀಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ನೆಲೆಸಿರುವ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿಗೆ ಭಾಷಾ ಸಂಕುಚಿತತೆ ಎಲ್ಲೆ ಮೀರಿ ಮಾನವೀಯತೆ ಮೆರೆದಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನೆಲೆಸಿರುವ ವಿದ್ಯಾರ್ಥಿ ಯಲ್ಲಾಲಿಂಗ ಭೀಮರಾಯ ಜೈನಾಪುರ ಮೂಲತ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಮುಚ್ಚಂಡಿ ಗ್ರಾಮದವರು. ಭೀಮರಾಯ ಅವರ ತಾಯಿ ಸಕ್ರೆವ್ವ ಅವರಿಗೆ ಬಾಬಾನಗರದಲ್ಲಿ ತವರಿನಿಂದ ಬಂದಿದ್ದ 1 ಎಕರೆ ಜಮೀನಿ ಬಳುವಳಿ ಬಂದಿತ್ತು. ಇದರಲ್ಲೇ ಜೀವನ ರೂಪಿಸಿಕೊಳ್ಳಲು ಭೀಮರಾಯ ಪತ್ನಿ ಮಹಾದೇವಿ ಸಮೇತ ಇಡೀ ಕುಟುಂಬ ಕರ್ನಾಟಕದ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಬಾಬಾನಗರಕ್ಕೆ ಬಂದು ನೆಲೆಸಿದ್ದರು.
ಬಡತನವನ್ನೆಲ್ಲ ಮೆಟ್ಟಿನಿಂತಿದ್ದ ಯಲ್ಲಾಲಿಂಗ, ವೈದ್ಯನಾಗುವ ಕನಸು ಹೊಂದಿ ಪರಿಶ್ರಮದಿಂದ ಬರೆದಿದ್ದಕ್ಕೆ ನೀಟ್ ಪರೀಕ್ಷೆಯಲ್ಲಿ ಸರ್ಕಾರಿ ಕೋಟಾದಲ್ಲಿ ಪ್ರವೇಶಕ್ಕೆ ಅವಕಾಶ ಸಿಕ್ಕಿತ್ತು. ಮಂಡ್ಯ ಜಿಲ್ಲೆಯ ಬೆಳ್ಳೂರ ತಾಲೂಕಿನ ನಾಗಮಂಗಲದ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಖಾಸಗಿ ಕಾಲೇಜಿನಲ್ಲಿ ಸೀಟು ಪಡೆದಿದ್ದರು. ಆದರೆ ಪ್ರವೇಶಕ್ಕೆ ಅಗತ್ಯ ಆರ್ಥಿಕ ಶಕ್ತಿ ಇಲ್ಲದೆ ವೈದ್ಯನಾಗುವ ಕನಸು ಕೈಬಿಟ್ಟಿದ್ದರು.
ತವರವರು ಕೊಟ್ಟ 1 ಎಕರೆ ಜಮೀನನಲ್ಲೇ 5 ಗುಂಟೆ ಜಮೀನನ್ನು ಮಹಾದೇವಿ-ಭೀಮರಾಯ ಇವರು ಸರಕಾರಿ ವಸತಿ ಶಾಲೆಗೆ ದಾನ ಮಾಡಿದ್ದರು. ಗ್ರಾಮದ ಬಡ ರೈತರು, ಕಾರ್ಮಿಕರು, ಆರ್ಥಿಕ ದುರ್ಬಲರಿಗೆ ಸ್ಥಳೀಯವಾಗಿ ಶೈಕ್ಷಣಿಕ ಸಹಕಾರ ಸಿಗಲಿ ಎಂಬ ಕಾರಣಕ್ಕೆ ತಮಗಿದ್ದ ತುಂಡು ಭೂಮಿಯಲ್ಲೇ ಆರ್ಥಿಕ ಸಂಕಷ್ಟಗಳನ್ನೆಲ್ಲ ಮರೆತು ಒಂದಷ್ಟು ದಾನ ಮಾಡಿ ಮಾದರಿ ಎನಿಸಿದ್ದರು.