ದಾವಣಗೆರೆ: ಬೆಳಗಾವಿಯ ಗಾಂಧಿಭವನದಲ್ಲಿ ಡಿ.12 ರಂದು ವಿರಾಟ್ ಪಂಚಶಕ್ತಿ ಸಮಾವೇಶ ನಡೆಯಲಿದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2 ಎ ಮೀಸಲಾತಿ ನೀಡಬೇಕು ಎಂಬ 2 ವರ್ಷ 2 ತಿಂಗಳ ಹೋರಾಟ ತಾರ್ಕಿಕ ಹಂತಕ್ಕೆ ತಲುಪಿದೆ.
ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಡಿ. 22 ರ ಒಳಗೆ ಸ್ಪಷ್ಟ ನಿರ್ಧಾರದ ಭರವಸೆ ನೀಡಿದ್ದಾರೆ. ಮೀಸಲಾತಿಯ ಸಿಹಿ ಸುದ್ದಿ ನೀಡಿದರೆ ಡಿ. 22 ರಂದು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವ, ಒಂದೊಮ್ಮೆ ವಿಳಂಬ ಮಾಡಿದರೆ ಮುಂದಿನ ಹಂತದ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸುವುದಕ್ಕಾಗಿ ವಿರಾಟ್ ಪಂಚಶಕ್ತಿ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಸೋಮವಾರ ಮಧ್ಯಾಹ್ನ 12 ಕ್ಕೆ ನಡೆಯುವ ವಿರಾಟ್ ಪಂಚಶಕ್ತಿ ಸಮಾವೇಶದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅಧ್ಯಕ್ಷತೆ ವಹಿಸುವರು. ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್, ಮಾಜಿ ಸಚಿವ ಎ.ಬಿ. ಪಾಟೀಲ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಒಳಗೊಂಡಂತೆ ಎಲ್ಲ ಜಿಲ್ಲಾ, ತಾಲೂಕು ಸಂಘಗಳ ಗಣ್ಯರು, ಮುಖಂಡರು ಇತರರು ಭಾಗವಹಿಸುವರು ಎಂದು ತಿಳಿಸಿದರು.
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಒತ್ತಾಯಿಸಿ ನಡೆಸಿದ ಹೋರಾಟಕ್ಕೆ ಬಹುತೇಕ ತಾರ್ಕಿಕ ಹಂತ ತಲುಪಿದೆ. ಮೀಸಲಾತಿ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ತಿಳಿಸಬೇಕು ಎಂದು ಒತ್ತಾಯಿಸಿ ಡಿ. 12 ರಂದು 25 ಲಕ್ಷ ಪಂಚಮಸಾಲಿ ಸಮಾಜ ಬಾಂಧವರೊಂದಿಗೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಲಾಗಿತ್ತು. ನ. 24 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮುತುವರ್ಜಿಯಿಂದ ಸಭೆ ನಡೆಸಿ, ಡಿ. 19 ರ ಒಳಗಾಗಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದುಕೊಂಡು, ಡಿ. 22 ರ ಒಳಗಾಗಿ ಮೀಸಲಾತಿ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸುವುದಾಗಿ ತಿಳಿಸಿ ದ್ದಾರೆ. ಈವರೆಗೆ ಸಮಾಜದವರು ಸರ್ಕಾರಕ್ಕೆ ಗಡುವು ನೀಡುತ್ತಿದ್ದೆವು. ಈಗ ಮುಖ್ಯಮಂತ್ರಿಯವರೇ ಡಿ.19ರ ಗಡುವು ನೀಡಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭಕ್ಕು ಮುನ್ನವೇ 2 ಎ ಮೀಸಲಾತಿ ಸಂಬಂಧಿಸಿದಂತೆ ಸಿಹಿ ಸುದ್ದಿ ನೀಡುವ ವಿಶ್ವಾಸ ಇದೆ. ಸರ್ಕಾರ ಮೀಸಲಾತಿ ಘೋಷಣೆ ಮಾಡಿದರೆ ಡಿ. 22 ರಂದು ಬೃಹತ್ ಕಾರ್ಯಕ್ರಮದ ಮೂಲಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು, ಮತ್ತೆ ವಿಳಂಬ ಮಾಡಿದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲೂ ಮಾನಸಿಕವಾಗಿ ಸಿದ್ದವಾಗಿದ್ದೇವೆ. ಈ ಎಲ್ಲದರ ಬಗ್ಗೆ ಚರ್ಚಿಸುವುದಕ್ಕಾಗಿಯೇ ಸೋಮವಾರ ಬೆಳಗಾವಿಯಲ್ಲಿ ವಿರಾಟ್ ಪಂಚಶಕ್ತಿ ಸಮಾವೇಶ ನಡೆಸಲಾಗುತ್ತಿದೆ ಎಂದು ಸ್ವಾಮೀಜಿ ತಿಳಿಸಿದರು.
Laxmi News 24×7