ಕೊಪ್ಪಳ: ಬಳ್ಳಾರಿಯಲ್ಲಿ ನಡೆದ ಎಸ್ ಸಿ, ಎಸ್ ಟಿ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರಕ್ಕೆ ಬನ್ನಿ ಎಂದು ಸವಾಲ್ ಹಾಕಿಲ್ಲ. ನಾನು ಕಾಂಗ್ರೆಸ್ ಪಕ್ಷಕ್ಕೆ ಸವಾಲ್ ಹಾಕಿದ್ದೇನೆ. ಅಲ್ಲದೇ, ಸಿದ್ದರಾಮಯ್ಯರನ್ನು ನೋಡಿಕೊಳ್ಳುವೆ ಎನ್ನುವ ಪದವನ್ನು ಬಳಸಿಲ್ಲ.
ಒಂದು ವೇಳೆ ಆ ಪದ ಬಳಸಿದ್ದರೆ, ಆ ಪದ ವಾಪಾಸ್ ಪಡೆಯುವೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ಅಚ್ಚರಿಯ ಹೇಳಿಕೆ ನೀಡಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬಳ್ಳಾರಿಯ ಸಮಾವೇಶದಲ್ಲಿ ನಾನು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಾನು ಸವಾಲು ಹಾಕಿದ್ದೇನೆ.
ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ನಾವು ಮೀಸಲಾತಿ ಕೊಟ್ಟು ಬಳ್ಳಾರಿಯಲ್ಲಿ ಬಂದು ಕುಳಿತಿದ್ದೇವೆ. ಕಾಂಗ್ರೆಸ್ ನಮ್ಮನ್ನ ಟೀಕೆ ಮಾಡಿತು. ನಮ್ಮ ತಾಕತ್ತಿನ ಬಗ್ಗೆ ಮಾತನಾಡಿದ್ದರು. ಹಾಗಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದೇನೆಯೇ ವಿನಃ ಸಿದ್ದರಾಮಯ್ಯರಿಗೆ ಸವಾಲು ಹಾಕಿಲ್ಲ.
ಸಿದ್ದರಾಮಯ್ಯರನ್ನು ಬನ್ನಿ ಎಂದು ನಾನು ಕರೆದಿಲ್ಲ. ಮಾಧ್ಯಮದಲ್ಲಿ ತಪ್ಪಾಗಿ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ. ಸಮಾವೇಶದಲ್ಲಿ ನಾನು ಸಿದ್ದರಾಮಯ್ಯರನ್ನು ನೋಡಿಕೊಳ್ಳುವೆ ಎನ್ನುವ ಪದವನ್ನ ಬಳಸಿಲ್ಲ. ಆಕಸ್ಮಿಕವಾಗಿ ನಾನು ಆ ಪದವನ್ನು ಬಳಸಿದ್ದರೆ ಆ ಪದವನ್ನು ವಾಪಾಸ್ ಪಡೆಯುವೆ. ನಾವು ಮೀಸಲಾತಿ ಕೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ತಾಕತ್ತು ಇದ್ದರೆ ಬರ್ರಿ ಎಂದು ಹೇಳಿದ್ದೇನೆ. ಅವರು ಬಳ್ಳಾರಿಯಲ್ಲೇ ನನಗೆ ಪೆದ್ದ ಅಂದರು. ಅವರ ಹೇಳಿಕೆಯಿಂದ ನಮ್ಮ ಸಮುದಾಯ ಜಾಗೃತವಾಗುತ್ತಿದೆ ಎಂದರು.