ಧಾರವಾಡ: ರಾಜ್ಯದಲ್ಲಿ ವಿಶ್ವಕರ್ಮ ಜನಾಂಗದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರೋ ಹಿನ್ನೆಲೆಯಲ್ಲಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಬಿಜೆಪಿ ಎಂಎಲ್‌ಸಿ ಕೆ.ಪಿ ನಂಜುಂಡಿ ಇಂದು ಬಹಿರಂಗಪಡಿಸಿದ್ದಾರೆ.
ವಿಶ್ವಕರ್ಮ ಸಮಾಜಕ್ಕೆ ಹೆಚ್ಚಿನ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಧಾರವಾಡಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಷ್ಟೋ ಕಡೆ ನಮ್ಮ ಸಮಾಜದವರು ಬೇರೆ ಬೇರೆ ಧರ್ಮಕ್ಕೆ ಹೋಗುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಹೆಚ್ಚಿಗೆ ಮತಾಂತರ ಆಗುತ್ತಿದ್ದಾರೆ ಎಂದು ಹೇಳಿದರು.
ಅದನ್ನು ನೀವು ತಡೆಯಬಹುದಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ನಾನು ಎಂಎಲ್‌ಸಿ ಅಷ್ಟೇ. ನನ್ನ ಕೈಯಲ್ಲಿ ಏನು ಅಧಿಕಾರ ಇದೆ ಅಂತ ಅವರನ್ನು ಹಿಡಿದುಕೊಳ್ಳಲಿ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕಾಗಿ ಹೋರಾಟ ಮಾಡಿದ್ವಿ. ಈಗ ಐದು ತಿಂಗಳಿನಿಂದ ನಿಗಮ ಖಾಲಿ ಇದೆ. ಅಲ್ಲಿ ಭರ್ತಿ ಮಾಡುತ್ತಿಲ್ಲ. ನಮ್ಮವರು ಅನೇಕರು ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಹೋಗುತ್ತಿದ್ದು ಅವರನ್ನು ತಡೆಯಲು ಆಗುತ್ತಿಲ್ಲ. ಕೇಳಿದ್ರೆ- ನಮಗೆ ತಿನ್ನೋಕೆ ಗತಿ ಇಲ್ಲ, ಅದ್ರಿಂದ ಹೋಗ್ತಿದೀವಿ, ಇಲ್ಲೇ ಇದ್ರೆ ನಿಮ್ಮ ಸರ್ಕಾರ ತಿನ್ನೋಕೆ ತಂದು ಕೊಡುತ್ತಾ? ಅಂತ ಕೇಳ್ತಾರೆ. ಬದುಕಲು, ಊಟಕ್ಕೆ ಗತಿ ಇಲ್ಲದೇ ಇದ್ದಾಗಲೇ ಅಲ್ವೇ ಬೇರೆ ಕಡೆ ಹೋಗೋದು. ನಾವು ಕಸುಬುಗಳನ್ನು ನಂಬಿ ಶೋಚನೀಯವಾಗಿದ್ದೇವೆ. ಸಾಮಾಜಿಕ ನ್ಯಾಯದಿಂದ ವಂಚಿತವಾದ ಸಮಾಜ ವಿಶ್ವಕರ್ಮರದ್ದು ಈ ಸ್ಥಿತಿ’ ಎಂದು ನೋವು ತೋಡಿಕೊಂಡರು.