ಅಥಣಿ: ಧರ್ಮ ರಕ್ಷಣೆ ಮಾಡುವವರನ್ನು ಧರ್ಮ ರಕ್ಷಿಸುತ್ತದೆ. ಧರ್ಮದೊಂದಿಗೆ ಎಲ್ಲರೂ ಕೈ ಜೋಡಿಸುವಂತೆ ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.
ಶ್ರೀಗಳು ಶ್ರೀಶೈಲವರೆಗಿನ ಜನಜಾಗೃತಿ ಪಾದಯಾತ್ರೆ ಮಾರ್ಗ ಮಧ್ಯೆ ಸತ್ತಿ ಗ್ರಾಮದಲ್ಲಿ ಜರುಗಿದ ಧರ್ಮಸಭೆಯ ಸಾನ್ನಿಧ್ಯವಹಿಸಿ ಮಾತನಾಡಿ, ಮನುಷ್ಯನ ಏಳ್ಗೆಗೆ ಧರ್ಮವು ಅತ್ಯವಶ್ಯವಾಗಿದೆ.
ಇತ್ತೀಚಿಗೆ ರಸಾಯನಿಕ ಗೊಬ್ಬರ ಅತಿಯಾಗಿ ಬಳಕೆಯಾಗುತ್ತಿದ್ದು, ಫಲವತ್ತಾದ ಭೂಮಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕೃಷಿಕರು ಸಾವಯವ ಕೃಷಿ ಮಾಡುವ ಮೂಲಕ ಭೂಮಿ ತಾಯಿಯ ಆರೋಗ್ಯ ಕಾಪಾಡಬೇಕು ಎಂದು ಹೇಳಿದರು.ಮಾನವರಾಗಿ ಜನಸಿದ ಮೇಲೆ ಎಲ್ಲರಲ್ಲಿ ಮಾನವೀಯ ಮೌಲ್ಯಗಳು ಇರಬೇಕು. ಕಡು ಕಷ್ಟ ಬಂದರೂ ಅಧರ್ಮದ ಹಾದಿ ಹಿಡಿಯಬಾರದು.
ಧರ್ಮದ ಮಾರ್ಗದಲ್ಲಿ ಸಾಗುವವರ ದಾರಿ ಸುಗಮವಾಗಿರುತ್ತದೆ. ಕಷ್ಟದಲ್ಲಿ ಎಲ್ಲರೂ ಕೈ ಬಿಟ್ಟರೂ ಧರ್ಮ ಎಂದಿಗೂ ಕೈ ಬಿಡುವುದಿಲ್ಲ. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಆರೋಗ್ಯವೇ ನಿಜವಾದ ಭಾಗ್ಯವಾಗಿದೆ. ಸರಾಯಿ, ಗುಟಕಾ, ಬೀಡಿ ಇವೆಲ್ಲವುಗಳನ್ನು ಗ್ರಾಮದ ಹಿರಿಯರು ಹೊರಹಾಕಿ ಆರೋಗ್ಯದ ಅರಿವು ಮೂಡಿಸಬೇಕು. ಪರಿಸರ ಕಾಳಜಿ ಮಾಡುವುದು ಸಹ ಎಲ್ಲ ಆದ್ಯ ಕರ್ತವ್ಯವಾಗಿದೆ. ನಮ್ಮ ಪಾದಯಾತ್ರೆಯ ಉದ್ದಕ್ಕೂ ಗಿಡಗಳನ್ನು ನೆಡುವ ಕಾರ್ಯ ಮಾಡುತ್ತಿದ್ದೇವೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಾಣ ಮಾಡುತ್ತಿದ್ದಾರೆ. ಈ ಪಾದಯಾತ್ರೆಯು ಹಲವಾರು ಸಂದೇಶಗಳನ್ನು ಹೊತ್ತು ಸಾಗುತ್ತಿದೆ ಎಂದು ಹೇಳಿದರು. ಪಾದಯಾತ್ರೆ ಮುಕ್ತಾಯವಾದ ಮೇಲೆ ಶ್ರೀಶೈಲ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಗಳು ಜರುಗಲಿವೆ. ಎಲ್ಲ ಭಕ್ತರು ಆ ಕಾರ್ಯಕ್ರಮಕ್ಕೆ ಬರಬೇಕು.