Breaking News

ಸಾರ್ವಜನಿಕ ಶೌಚಾಲಯದಿಂದಲೇ ಆದಾಯ,ಈ ವಿಚಾರ ಮಂಡಿಸಿದಾಗ ಸಭಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ

Spread the love

ನ್ನಮ್ಮನ ಕಿತ್ತೂರು (ಸಂಗೊಳ್ಳಿ ರಾಯಣ್ಣ ವೇದಿಕೆ): ‘ನನ್ನ ಸ್ವಂತ ಜಮೀನಿನಲ್ಲಿ ಸಾರ್ವಜನಿಕರಿಗೆ ಶೌಚಾಲಯ ಕಟ್ಟಿಸಿದೆ. ಅದರಿಂದಲೇ ಬಯೊಗ್ಯಾಸ್ ತಯಾರಿಸಿದೆ. ವಿದ್ಯುತ್ ಉತ್ಪಾದಿಸಿದೆ. ಎರೆಹೊಳ ಗೊಬ್ಬರ ಮಾಡಿದೆ. ಸ್ವಾವಲಂಬನೆಗೆ ಇನ್ನೇನು ಬೇಕು..?

 

‘ಕೃಷಿ ಪಂಡಿತ’ ಪ್ರಶಸ್ತಿ ಪುರಸ್ಕೃತ ಕುರುಗುಂದದ ದಯಾನಂದ ಅಪ್ಪಯ್ಯನವರಮಠ ಅವರು ಕಿತ್ತೂರು ಉತ್ಸವ ಅಂಗವಾಗಿ ಮಂಗಳವಾರ ಕೃಷಿ ವಿಚಾರ ಸಂಕಿರಣದಲ್ಲಿ ಈ ವಿಚಾರ ಮಂಡಿಸಿದಾಗ ಸಭಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಊರ ಮುಂದಿನ ಹೊಲ ನಮ್ಮ ಹಿಸ್ಸೆಗೆ ಬಂದಿತ್ತು. ಊರ ಮುಂದಿನ ಹೊಲವೆಂದರೆ ಕೇಳಬೇಕೇ, ಸಾರ್ವಜನಿಕರು ಶೌಚಕ್ಕೆ ಹೆಚ್ಚು ಬಳಸುವಂತಾಗಿತ್ತು. ಇದರಿಂದಾಗಿ ತಾಯಿಯ ಚಿನ್ನ ಅಡವಿಟ್ಟು ಇದೇ ಹೊಲದಲ್ಲಿ 30 ಜನರಿಗೆಂದು ಐದು ಶೌಚಾಲಯ ನಿರ್ಮಿಸಿದೆ. ಇದೇ ಶೌಚಾಲಯ ಬಳಸಿ ಬಯೋಗ್ಯಾಸ್, ವಿದ್ಯುತ್‌ ಮತ್ತು ಗೊಬ್ಬರ ಉತ್ಪಾದಿಸಿದೆ. ಈಗ ಒಂದು ಹಿಡಿ ರಾಸಾಯನಿಕ ಗೊಬ್ಬರ ಕೊಳ್ಳುವುದಿಲ್ಲ. ಉತ್ಪಾದಿಸಿದ ಎಲ್ಲ ಗೊಬ್ಬರವನ್ನು ಹೊಲಕ್ಕೆ ಬಳಸಿ ಫಲವತ್ತತೆ ಹೆಚ್ಚಿಸಿಕೊಂಡಿದ್ದೇವೆ. ಹಾಕಿದ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯುತ್ತಿದ್ದೇವೆ’ ಎಂದು ಅವರು ಅನುಭವ ಹಂಚಿಕೊಂಡರು.

‘ಹೊಲದಲ್ಲಿ ಎತ್ತುಗಳನ್ನು ಹೂಡಿ ಒಕ್ಕಲು ಮಾಡಲು ಮೇಟಿ ನಿಲ್ಲಿಸುತ್ತಿದ್ದರು. ಈ ಮೇಟಿ ನಿಲ್ಲಿಸಲು ತೋಡಿದ್ದ ತಗ್ಗಿಗೆ ದಾರಿಯ ಮಣ್ಣು ಹಾಕುತ್ತಿದ್ದರು. ಹೊಲದ ಮಣ್ಣು ದಾರಿಗೆ ಹರವುತ್ತಿದ್ದರು. ಇದರಿಂದ ಹೆಚ್ಚು ರಾಶಿಯಾಗುತ್ತದೆ ಎಂಬ ನಂಬಿಕೆಯಿತ್ತು’ ಎಂದು ಹೇಳಿದರು.

ಪ್ರಗತಿಪರ ರೈತ ಶ್ರೀಕರ ಕುಲಕರ್ಣಿ ಮಾತನಾಡಿ, ‘ಪಾರಂಪರಿಕ ಮತ್ತು ನೂತನ ಪದ್ಧತಿ ಎರಡೂ ಬಳಸಿ ಕೃಷಿ ಮಾಡಿದರೆ ಹೆಚ್ಚು ಆದಾಯ ಗಳಿಸಬಹುದು. ಕೃಷಿಯ ಜೊತೆಗೆ ಹೈನುಗಾರಿಕೆ, ಮೇಕೆ ಸಾಕಾಣಿಕೆ ಮತ್ತು ಮೀನು ಸಾಕಾಣಿಕೆ ಮಾಡಬೇಕು. ವೈವಿಧ್ಯಮಯ ಬೆಳೆ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಕೈ ಹಿಡಿಯುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಬಡವಾಗುತ್ತದೆ. ಸಾಧ್ಯವಿದ್ದಷ್ಟು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು’ ಎಂದು ಹೇಳಿದರು.

ಪ್ರಗತಿಪರ ರೈತರು, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರನ್ನು ಕಾರ್ಯಕ್ರಮದಲ್ಲಿ ಸತ್ಕರಿಸಲಾಯಿತು.

ಪ್ರೊಬೆಷನರಿ ಉಪವಿಭಾಗಾಧಿಕಾರಿ ಪ್ರತಿಭಾ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಕ್ತರ್, ಉಪನಿರ್ದೇಶಕ ಕೊಂಗವಾಡ, ಧಾರವಾಡ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಸ್.ಎಸ್. ನೂಲಿ, ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಎಸ್.ಎಸ್. ಹಿರೇಮಠ, ಶಿವಾನಂದ ಮಠಪತಿ, ಯಮನಪ್ಪ ರಾಜಾಪುರ, ಅಪ್ಪಣ್ಣ ಪಾಗಾದ, ದಿನೇಶ ವಳಸಂಗ, ಶ್ಯಾಮ್ ಶಿಲೇದಾರ, ವಿರುಪಾಕ್ಷಗೌಡ ಪಾಟೀಲ ಇದ್ದರು.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ