ಇದೇ ಅಕ್ಟೋಬರ್ 23, 24 ಹಾಗೂ 25ರಂದು ಮೂರು ದಿನಗಳ ಕಾಲ ಕಿತ್ತೂರು ರಾಣಿ ಚನ್ನಮ್ಮಾಜಿ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ವಿಶೇಷವಾಗಿ ಸಿಎಂ ಬೊಮ್ಮಾಯಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಉತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಮಾಹಿತಿ ನೀಡಿದ್ದಾರೆ.
ಹೌದು ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ್ದು ನಮ್ಮ ನಾಡಿನ ಹೆಮ್ಮೆ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮಾಜಿ. 1824 ಅಕ್ಟೋಬರ್ 24ರಂದು ಬ್ರಿಟಿಷರ ವಿರುದ್ಧ ದಿಗ್ವಿಜಯ ಸಾಧಿಸಿದ ಸವಿನೆನಪಿಗೋಸ್ಕರ ಕಳೆದ ಹಲವಾರು ವರ್ಷಗಳಿಂದ ಕಿತ್ತೂರು ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷದಿಂದ ಕಿತ್ತೂರು ಉತ್ಸವ ರಾಜ್ಯಮಟ್ಟದ ಉತ್ಸವವಾಗಿ ಆಚರಿಸಲ್ಪಡುತ್ತಿದೆ.
ಈ ಸಂಬಂಧ ಶನಿವಾರ ಬೆಳಗಾವಿಯ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡರ ಅಕ್ಟೋಬರ್ 2ರಂದು ಮಹಾತ್ಮಾ ಗಾಂಧೀಜಿ ಜಯಂತಿ ದಿನ ತಾಯಿ ಚನ್ನಮ್ಮಾಜಿ ಜ್ಯೋತಿಗೆ ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಅವರು ಹಾಗೂ ಸಚಿವರು ಚಾಲನೆ ನೀಡಿದ್ದರು. ಇವತ್ತಿಗೆ 21ನೇ ದಿನವಾಗಿದ್ದು ಬೈಲಹೊಂಗಲನಲ್ಲಿರುವ ಚನ್ನಮ್ಮಾಜಿ ಸಮಾಧಿಗೆ ಜ್ಯೋತಿ ತಲುಪಲಿದ್ದು, ರವಿವಾರ ಮುಂಜಾನೆ 10 ಗಂಟೆಗೆ ಕಿತ್ತೂರಿನ ಚನ್ನಮ್ಮಾಜಿ ಸರ್ಕಲ್‍ಗೆ ಆಗಮಿಸಲಿದೆ.
ಈ ವೇಳೆ ರಾಜ್ಯದ ವಿವಿಧ ಕಲಾತಂಡಗಳು, ರೂಪಕಗಳ ಜೊತೆಗೆ ಈ ಬಾರಿ ವಿಶೇಷವಾಗಿ ಆನೆಯ ಮೇಲೆ ಚನ್ನಮ್ಮಾಜಿಯ ಮೆರವಣಿಗೆ ಮಾಡಲಾಗುತ್ತದೆ. ಜಿಲ್ಲಾ ಸಚಿವರು, ಸಂಸದರು, ಶಾಸಕರು, ಜಿಲ್ಲೆಯ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು, ಕಿತ್ತೂರು ನಾಡಿನ ಜನರು ತಾಯಿಯ ಜ್ಯೋತಿಯನ್ನು ಸ್ವಾಗತಿಸುವ ಕೆಲಸ ಮಾಡಲಿದ್ದಾರೆ ಎಂದರು.
ನಂತರ ಮಧ್ಯಾಹ್ನ 3 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಮೂರು ವೇದಿಕೆ ಮಾಡಿದ್ದೇವೆ. ರಾಣಿ ಚನ್ನಮ್ಮಾಜಿ ಹೆಸರಿನಲ್ಲಿ ಕೋಟೆ ಆವರಣದಲ್ಲಿ ಮೊದಲ ವೇದಿಕೆ. ಗುರುಶಿದ್ದೇಶ್ವರ ಕಾಲೇಜು ಮೈದಾನದಲ್ಲಿ ಮಲ್ಲಸರ್ಜ ದೇಸಾಯಿ ಅವರ ಹೆಸರಿನಲ್ಲಿ ಎರಡನೇ ವೇದಿಕೆ. ಅದೇ ರೀತಿ ಕಲ್ಮಠದ ಮುಂಭಾಗದಲ್ಲಿರುವ ಚನ್ನಮ್ಮಾಜಿ ಸೈನಿಕ ಶಾಲೆಯ ಮೈದಾನದಲ್ಲಿ ಶೂರ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಮೂರನೇ ವೇದಿಕೆ ಮಾಡಲಾಗಿದೆ.
ವೇದಿಕೆ ಉದ್ಘಾಟನೆ ಕಾರ್ಯಕ್ರಮ 7 ಗಂಟೆಗೆ ನೆರವೇರಲಿದೆ. ಇದಾದ ಬಳಿಕ ಶಾಲೆಯ ಮಕ್ಕಳಿಂದ ಒಳ್ಳೆಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ. 2ನೇ ವೇದಿಕೆಯಲ್ಲಿ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿವೆ. ಅದೇ ರೀತಿ 3ನೇ ವೇದಿಕೆಯಲ್ಲಿ ಭಜನೆ, ನಾಟಕ, ಕಿತ್ತೂರು ಚನ್ನಮ್ಮಾಜಿ ನಾಟಕ ಸೇರಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕ ಜಿಲ್ಲಾಡಳಿತ ಮಾಡುತ್ತಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದರು.
ಅದೇ ರೀತಿ 24ರಂದು ಇಡೀ ಒಂದು ದಿನವನ್ನು ಮಹಿಳೆಯರಿಗೆ ಮೀಸಲು ಇಡುವ ಕೆಲಸ ಮಾಡಿದ್ದೇವೆ. ಈ ವೇಳೆ ಕವಿಗೋಷ್ಠಿ, ಚನ್ನಮ್ಮಾಜಿಯ ಇತಿಹಾಸ, ಹಲವಾರು ಹೋರಾಟಗಾರರ ಇತಿಹಾಸ, ಸಾಹಿತ್ಯ ಗೋಷ್ಠಿ, ಚುಟುಕು ಸಾಹಿತ್ಯ ಗೋಷ್ಠಿ ಸೇರಿ ಇನ್ನಿತರ ಸಾಹಿತ್ಯಿಕ ಚಟುವಟಿಕೆಗಳು 2ನೇ ವೇದಿಕೆಯಲ್ಲಿ ನಡೆಯಲಿವೆ.
ಅವತ್ತಿನ ಕಾರ್ಯಕ್ರಮದ ಉದ್ಘಾಟನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗಮಿಸಲಿದ್ದಾರೆ. ಅದೇ ರೀತಿ ಇನ್ಫೋಸಿಸ್ ಅಧ್ಯಕ್ಷರಾದ ಸುಧಾ ಮೂರ್ತಿ, ಜಿಲ್ಲೆಯ ಸಚಿವೆ ಶಶಿಕಲಾ ಜೊಲ್ಲೆ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಪತಿಗಳು ಸೇರಿ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.