ಬೆಳಗಾವಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ, ಪತ್ನಿ ಹಾಗೂ ಪುಟ್ಟ ಮಗು ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಹೊಳೆಪ್ಪ ಮಾರುತಿ ಮಸ್ತಿ (25), ಇವರ ಪತ್ನಿ ವಾಸಂತಿ (22) ಹಾಗೂ ಇವರ ಒಂದೂವರೆ ವರ್ಷದ ಮಗು ಮೃತಪಟ್ಟರು.
ಮದ್ಯದ ಅಮಲಿನಲ್ಲಿ ಹೊಳೆಪ್ಪ ಗುರುವಾರ ಪತ್ನಿಯೊಂದಿಗೆ ಜಗಳವಾಡಿದ್ದ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುವ ಉದ್ದೇಶದಿಂದ ವಿಷ ಕುಡಿದಿದ್ದ. ತಕ್ಷಣ ಸ್ನೇಹಿತರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆತ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ. ಇದರಿಂದ ಮನನೊಂದ ಪತ್ನಿ ವಾಸಂತಿ ಕೂಡ ತಮ್ಮ ಒಂದೂವರೆ ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಮಗುವನ್ನು ಎತ್ತಿಕೊಂಡು ಊರ ಹೊರಗಿನ ಹೊಲಕ್ಕೆ ಹೋಗಿದ್ದ ವಾಸಂತಿ ಮರಳಿ ಮನೆಗೆ ಬಂದಿರಲಿಲ್ಲ. ಇದರಿಂದ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ತಡರಾತ್ರಿ ಅವರ ಶವ ಕಂಡುಬಂದಿದೆ. ವಾಸಂತಿ ಕಾಲಿನಡಿ ಪುಟ್ಟ ಮಗುವಿನ ಮೃತದೇಹ ಬಿದ್ದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಂಪತಿಗೆ ಮೂರು ವರ್ಷದ ಮತ್ತೊಬ್ಬ ಪುತ್ರಿ ಇದ್ದು, ಆಟವಾಡಲು ಹೊರಗೆ ಹೋಗಿದ್ದರಿಂದ ಬದುಕುಳಿದಿದ್ದಾಳೆ. ಘಟನೆ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.