ಬೆಂಗಳೂರು/ಬಳ್ಳಾರಿ: ರಾಜ್ಯದಲ್ಲಿನ ಜೋಡೋ ಯಾತ್ರೆಯ ಪ್ರಮುಖ ಘಟ್ಟವಾದ ಬಳ್ಳಾರಿ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾಂಗ್ರೆಸ್‌ನ ಶಕ್ತಿಪ್ರದರ್ಶನಕ್ಕೂ ವೇದಿಕೆ ಸೃಷ್ಟಿಯಾದಂತಾಗಿದೆ.
ಮುಂದಿನ ವಿಧಾನಸಭೆ ಚುನಾವಣೆಗೆ ರಣಕಹಳೆ ಹಾಗೂ ಗಣಿನಾಡಿನಲ್ಲಿ ಶಕ್ತಿ ಪ್ರದರ್ಶನ ಎಂದೇ ಬಿಂಬಿತವಾಗಿರುವ ಸಮಾವೇಶಕ್ಕೆ ಮೂರು ಲಕ್ಷ ಜನರ ಸೇರುವ ನಿರೀಕ್ಷೆಯಿದೆ.
ಈ ಮಧ್ಯೆ, ಪ್ರಿಯಾಂಕಾ ಗಾಂಧಿ ಬಳ್ಳಾರಿ ಸಮಾವೇಶಕ್ಕೆ ಬರುವ ಕಾರ್ಯಕ್ರಮ ನಿಗದಿಯಾಗಿತ್ತಾದರೂ ಅ.22 ರಂದು ರಾಯಚೂರಿಗೆ ಬಂದು ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗಿದೆ.
2010ರ ಜುಲೈನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗಣಿ ರೆಡ್ಡಿ ಸಹೋದರರ ವಿರುದ್ಧ ಸಮರ ಸಾರಿ ಇದೇ ಮೈದಾನದಲ್ಲಿ ಐತಿಹಾಸಿಕ ಸಮಾವೇಶ ನಡೆಸಿದ್ದರು. ಅದಕ್ಕೂ ಮುನ್ನ ಸೋನಿಯಾಗಾಂಧಿ ಅವರು ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ವಿರುದ್ಧ ಸ್ಪರ್ಧೆ ಮಾಡಿದ್ದ ಸಂದರ್ಭದಲ್ಲೂ ಈ ನೆಲದಲ್ಲಿ ಬೃಹತ್ ಸಮಾವೇಶ ನಡೆದಿತ್ತು.
ಐತಿಹಾಸಿಕ ಸಮಾವೇಶ
ಈ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, 3500 ಕಿ.ಮೀ. ನಡಿಗೆಯ ಗುರಿಯೊಂದಿಗೆ ಸೆ.7ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಯಾತ್ರೆ ನಾಳೆಗೆ 1 ಸಾವಿರ ಕಿ.ಮೀ. ತಲುಪಲಿದೆ. ಅಂದರೆ, ಆಂಧ್ರಪ್ರದೇಶವನ್ನು ಪ್ರವೇಶಿಸುವ ಮೊದಲು ಬಳ್ಳಾರಿ ಜಿಲ್ಲೆಯ ಹೊರವಲಯಕ್ಕೆ ಬಂದಾಗ 1000 ಕಿಲೋಮೀಟರ್ ತಲುಪಿದಂತಾಗುತ್ತದೆ ಎಂದು ಹೇಳಿದರು.
ಈ ಸಮಾವೇಶದಲ್ಲಿ 20 ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಜಸ್ಥಾನ, ಛತ್ತೀಸ್‌ಗಡ ಮುಖ್ಯಮಂತ್ರಿಗಳು ಸೇರಿ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.