ಬೆಳಗಾವಿ ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಉದ್ಘಾಟನೆಯಾಗಿದ್ದ ಬ್ರಿಡ್ಜ್ ಮೇಲಿನ ರಸ್ತೆ ಹಾಳಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೇತುವೆ ಉದ್ಘಾಟನೆಯದ ಎರಡೇ ದಿನಗಳಲ್ಲಿ ರಸ್ತೆ ಹಾಳಾಗಿದ್ದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಒಂದೆಡೆ ತಗ್ಗು ಬಿದ್ದಿರುವ ರಸ್ತೆಯಲ್ಲಿಯೇ ಸಾಗುತ್ತಿರುವ ಭಾರೀ ವಾಹನಗಳು, ಎಲ್ಲಾ ತಮ್ಮ ವಾಹನ ಬಿದ್ದು ಬಿಡುತ್ತೋ ಎಂಬ ಭಾವನೆಯಿಂದ ಭಯದಲ್ಲೇ ಪ್ರಯಾಣ ಮಾಡುತ್ತಿರೋ ಪ್ರಯಾಣಿಕರು ಒಂದೆಡೆಯಾದ್ರೆ, ಎಡಗೈಯ್ಯಲ್ಲಿ ಪ್ರಾಣ ಹಿಡಿದುಕೊಂಡು ಸಾಗುತ್ತಿರೋ ಪ್ರಯಾಣಿಕರು. ಹೌದು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಟಿಳಕವಾಡಿಯ 3ನೇ ರೈಲ್ವೇ ಗೇಟ್ ಬಳಿ ಇತ್ತೀಚೆಗೆ ನಿರ್ಮಾಣವಾಗಿ ಉದ್ಘಾಟನೆಗೊಂಡಿರುವ ರೈಲ್ವೇ ಓವರ್ ಬ್ರಿಡ್ಜ್ನ ನರಕ ಸದೃಶ ದೃಶ್ಯಗಳು.
ಇನ್ನು ಕಳೆದ ನಾಲ್ಕು ವರ್ಷಗಳಿಂದ ಈ ರೈಲ್ವೇ ಬ್ರಿಡ್ಜ್ ಕಾಮಗಾರಿಯನ್ನು ನಡೆಸಲಾಗಿದೆ. ಇನ್ನು ಇತ್ತೀಚೆಗೆ ಈ ಬ್ರಿಡ್ಜ್ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು ಕಳೆದ ಎರಡು ದಿನಗಳ ಹಿಂದೆಯಷ್ಟೇ ಅದನ್ನು ಉದ್ಘಾಟಿಸಲಾಗಿತ್ತು. ಇನ್ನು ಎರಡು ದಿನಗಳಲ್ಲಿಯೇ ಈ ರಸ್ತೆ ದುರಾವಸ್ಥೆಯನ್ನು ತಲುಪಿದೆ. ರೈಲ್ವೇ ಇಲಾಖೆಯ ಈ ಕಾಮಗಾರಿಗೆ ಸಾರ್ವಜನಿಕರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಎರಡೇ ದಿನಗಳಲ್ಲಿ ಈ ರಸ್ತೆ ಕಿತ್ತುಹೋಗಿದೆ ಎಂದರೆ ಅದು ಹೇಗೆ ಕಾಮಗಾರಿಯನ್ನು ಮಾಡಿದ್ದಾರೆ ಎಂಬ ಸಂಶಯ ಉಂಟಾಗುತ್ತಿದೆ.
ಇನ್ನು ರೈಲ್ವೇ ಇಲಾಖೆ ಮಾಡಿದ ಈ ಕಾಮಗಾರಿಯನ್ನು ಕುರಿತಂತೆ ಸ್ಥಳೀಯ ನಿವಾಸಿ ಸಂಜಯ್ ಶಾಪೂರ್‌ಕರ್ ಹಾಗೂ ವಿಶಧಾಲ ಭಾಟಿಯಾ ಬೇಸರ ವ್ಯಕ್ತಪಡಿಸಿದ್ದಾರೆ. ರಸ್ತೆ ಮಾಡಿದ್ದಾರೆ, ಆದರೆ ಚೆನ್ನಾಗಿ ಕೆಲಸ ಮಾಡಿಲ್ಲ. ಇನ್ನೂ ಫಿನಿಶ್ ಚೆನ್ನಾಗಿ ಬಂದಿಲ್ಲ. ಓವರ್ ಲೋಟ್ ಗಾಡಿಗಳು ಬರುತ್ತಿರುವುದರಿಂದ ಪೂರ್ತಿಯಾಗಿ ರಸ್ತೆ ಹಾಳಾಗುತ್ತಿದೆ. ಇನ್ನು ಇದು ಡ್ಯಾಮೇಜ್ ಆಗೋದು ಗ್ಯಾರಂಟಿ. ರಸ್ತೆ ಹಾಳಾದಂತೆ ದಿನಾಲೂ ರಿಪೇರಿ ಮಾಡುತ್ತಿದ್ದಾರೆ. ಇನ್ನು ಕಾಮಗಾರಿಯನ್ನು ಕೂಡ ಚೆನ್ನಾಗಿ ಮಾಡಿಲ್ಲ. ಓವರ್‌ಲೋಡ್ ಗಾಡಿಗಳಿಂದಾಗಿ ರಸ್ತೆ ಹಾಳಾಗುತ್ತಿದೆ. ಇನ್ನು ಅಧಿಕಾರಿಗಳು ಯಾರೂ ಬಂದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರು.