ವಿಧಾನ ಪರಿಷತ್‍ನ ಸಭಾಪತಿ ಸ್ಥಾನ ನೀಡುವ ಕುರಿತಂತೆ ಬಿಜೆಪಿ ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅವೆಲ್ಲ ಈಗ ನಿವಾರಣೆಯಾಗಿದ್ದು ಪಕ್ಷದ ಧುರೀಣರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ವಿಧಾನ ಪರಿಷತ್ ಸದಸ್ಯರಾದ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣವೆಂದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಇಲ್ಲಿಯೂ ಒಂದು ತರಹದ ಸಂವಹನ ಕೊರತೆ ಇದ್ದಂತಿತ್ತು. ಅದೀಗ ನಿವಾರಣೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪನವರು, ಜಗದೀಶ ಶೆಟ್ಟರ್, ಮತ್ತಿತರ ನಾಯಕರು ಕೊಟ್ಟ ಮಾತಿನಂತೆ ನಡೆದುಕೊಳ್ಳುವರೆಂಬ ಭರವಸೆ ತಮಗಿದೆ ಎಂದು ನುಡಿದರು.
ಪಕ್ಷದ ಕೋರ್ ಕಮಿಟಿ ಸಭೆಯಲ್ಲಿಯೂ ಈ ವಿಷಯದ ಕುರಿತು ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಗಿದ್ದು ಅಧಿವೇಶನ ಆರಂಭಗೊಂಡ ನಂತರ ಅದು ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ತಿಳಿಸಿದರು. ಪಕ್ಷದಲ್ಲಿನ ಕೆಲವರು ತಮಗೆ ಆ ಸ್ಥಾನ ಬೇಕೆಂಬ ಬೇಡಿಕೆಯಿರಿಸಿದ್ದರು. ಆದರೀಗ ಅದೆಲ್ಲ ಸರಿಯಾಗಿದೆ. ಎಲ್ಲರೂ ಒಂದು ತೀರ್ಮಾನಕ್ಕೆ ಬಂದಾಗಿದೆ ಎಂದ ಅವರು, ನಾಯಕರು ಮಾತು ಉಳಿಸಿಕೊಳ್ಳುತ್ತಾರೆ ಎಂದು ಹೇಳಿದರು.