ಚಾಮರಾಜನಗರ: ನಮ್ಮ ವಿಚಾರಗಳನ್ನು ಹೇಳಲು ಅವಕಾಶವಿಲ್ಲ. ಸಂಸತ್ತಿನಲ್ಲಿ ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ, ವಿಧಾನಸಭೆಗಳಲ್ಲೂ ಮಾತನಾಡಲು ಅವಕಾಶವಿಲ್ಲ. ಆದ್ದರಿಂದ ಪಾದಯಾತ್ರೆ ಬಿಟ್ಟು ಬೇರೆ ದಾರಿ ನಮಗಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಗುಂಡ್ಲುಪೇಟೆಯ ಮೂಲಕ ಶುಕ್ರವಾರ ರಾಜ್ಯ ಪ್ರವೇಶಿಸಿದ ‘ಭಾರತ್ ಜೋಡೋ ಯಾತ್ರೆ’ಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಈ ಯಾತ್ರೆ ದೇಶದ ಧ್ವನಿ. ಇಲ್ಲಿ ನಾನೊಬ್ಬನೇ ಅಲ್ಲ. ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಅವರ ಕಷ್ಟಗಳನ್ನು ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಜಾತಿ, ಧರ್ಮ, ಭಾಷೆ ಎಂಬ ಭೇದ ಭಾವ ಇಲ್ಲ. ಸಂವಿಧಾನ ರಕ್ಷಣೆಯ ಉದ್ದೇಶವನ್ನು ಹೊಂದಿರುವ ಈ ಯಾತ್ರೆಯನ್ನು ತಡೆಯಲು ಯಾವ ವ್ಯಕ್ತಿ, ಶಕ್ತಿಗೂ ಸಾಧ್ಯವಿಲ್ಲ’ ಎಂದರು.
ದೇಶ ಎದುರಿಸುತ್ತಿರುವ ಸಮಸ್ಯೆಗಳು, ಇಲ್ಲಿ ನಡೆಯುತ್ತಿರುವ ಹಿಂಸೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತನಾಡಲು ಇರುವ ಮಾರ್ಗಗಳನ್ನು ವಿರೋಧ ಪಕ್ಷದ ಪಾಲಿಗೆ ಮುಚ್ಚಲಾಗಿದೆ. ಪಾದಯಾತ್ರೆ ಬಿಟ್ಟು ಜನರ ಬಗ್ಗೆ ಮಾತನಾಡಲು ಬೇರೆ ದಾರಿಯೇ ಇಲ್ಲ ಎಂದರು.
‘ಬಿಜೆಪಿ, ಆರ್ ಎಸ್‌ಎಸ್ ವಿಚಾರಧಾರೆಗಳು ದೇಶದಲ್ಲಿ ದ್ವೇಷ, ಹಿಂಸೆಯನ್ನು ಸೃಷ್ಟಿಸುತ್ತಿವೆ. ದೇಶದ ಸಂವಿಧಾನ ಇಲ್ಲದಿದ್ದರೆ, ತ್ರಿವರ್ಣ ಧ್ಬಜಕ್ಕೆ ಬೆಲೆ ಇಲ್ಲ. ಸಂವಿಧಾನವನ್ಜು ರಕ್ಷಿಸಬೇಕಾಗಿದೆ. ನಮ ಯಾತ್ರೆಯಲ್ಲಿ ದ್ವೇಷ, ಹಿಂಸೆ ಇಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುತ್ತೇವೆ. ಯಾತ್ರೆಯಲ್ಲಿ ಯಾರಾದರೂ ಎಡವಿ ಬಿದ್ದರೆ, ಉಳಿದವರು ಅವರನ್ನು ಮೇಲಕ್ಕೆತ್ತಿ ಮುನ್ನಡೆಸುತ್ತಾರೆ. ಬಿದ್ದವನ ಜಾತಿ, ಧರ್ಮ, ಭಾಷೆ ಎಂದು ಯಾರೂ ಕೇಳುವುದಿಲ್ಲ’ ಎಂದು ರಾಹುಲ್ ಹೇಳಿದರು.