ಹುಬ್ಬಳ್ಳಿ :ಜಿಲ್ಲಾ ಪಂಚಾಯಿತಿ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶ ಮಾಡದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಇಂಥ ಸನ್ನಿವೇಶದಲ್ಲಿ, ಎದುರಾಗಲಿರುವ ವಿಧಾನಸಭೆ ಚುನಾವಣೆಗೆ ಧಾರವಾಡ ಕ್ಷೇತ್ರದಿಂದಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ವಿನಯ ಕುಲಕರ್ಣಿ ನೀಡಿರುವ ಹೇಳಿಕೆ ಸಹಜವಾಗಿ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಧಾರವಾಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧಿಸಿರುವುದರಿಂದ ವಿನಯ ಕುಲಕರ್ಣಿ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಆದರೆ, ಮೇಲಿಂದ ಮೇಲೆ ಅವರು ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಶಿಗ್ಗಾಂವಿಯಿಂದಲೇ ಸ್ಪರ್ಧೆ ಮಾಡಬಹುದು ಎನ್ನುವ ಮಾತು ಚಾಲ್ತಿಯಲ್ಲಿತ್ತು. ಆದರೆ, ವಿನಯ ಕುಲಕರ್ಣಿ ಮಾತ್ರ ಯಾವುದೇ ಕಾರಣಕ್ಕೂ ಮುಂದಿನ ರಾಜಕೀಯ ನಡೆ ಏನು ಎನ್ನುವ ಬಗ್ಗೆ ತುಟಿ ಪಿಟಿಕ್ ಅಂದಿರಲಿಲ್ಲ.
ಆದರೀಗ ಪಂಚಮಸಾಲಿ ಹೋರಾಟಕ್ಕೆಂದು ಶಿಗ್ಗಾಂವಿಗೆ ಬಂದಿದ್ದ ವಿನಯ ಕುಲಕರ್ಣಿ, ಮುಂದಿನ ರಾಜಕೀಯ ನಡೆಯ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಧಾರವಾಡ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆಂದು ಹೇಳಿದ್ದಾರೆ. ಮುಂದಿನ ಚುನಾವಣೆಯ ಹೊತ್ತಿಗೆ ಧಾರವಾಡ ಜಿಲ್ಲೆ ಪ್ರವೇಶಕ್ಕೆ ನ್ಯಾಯಾಲಯದಿಂದ ಅನುಮತಿ ಸಿಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿರುವ ವಿನಯ, ‘ಕ್ಷೇತ್ರದಲ್ಲಿ ಪತ್ನಿ ಶಿವಲೀಲಾ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಿಂದ ದೂರವಿದ್ದರೂ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಕ್ಷೇತ್ರದ ಜನತೆ ಇಂದಿಗೂ ಪ್ರೀತಿ-ವಿಶ್ವಾಸದಿಂದ ಇದ್ದಾರೆ. ಒಂದು ವೇಳೆ ಧಾರವಾಡ ಜಿಲ್ಲೆ ಪ್ರವೇಶಕ್ಕೆ ಅವಕಾಶ ಸಿಗದಿದ್ದರೂ ಹೊರಗಿದ್ದೇ ಚುನಾವಣೆಗೆ ಸ್ಪರ್ಧಿಸುವೆ’ ಎಂದಿದ್ದಾರೆ. ತನ್ಮೂಲಕ ತನ್ನ ರಾಜಕೀಯ ಭವಿಷ್ಯ ಇನ್ನೂ ಅಂತ್ಯವಾಗಿಲ್ಲ ಎನ್ನುವುದನ್ನೂ ಒತ್ತಿ ಹೇಳಿದ್ದಾರೆ.
ವಿನಯ ಕುಲಕರ್ಣಿ ಅವರ ಈ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಒಳಪಡುತ್ತಿದೆ. ಅವರ ಅಭಿಮಾನಿ ಬಳಗದಲ್ಲಿ ಹುರುಪು ಮೂಡಿಸಿದೆ. ರಾಜಕೀಯ ಭವಿಷ್ಯ ಮುಗಿದೇ ಹೋಯಿತು ಎಂದು ಆಡಿಕೊಂಡವರಿಗೆ ಈ ಮುಖೇನ ವಿನಯ ಕುಲಕರ್ಣಿ ಸೂಚ್ಯ ಸಂದೇಶವನ್ನೂ ರವಾನಿಸಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ಧಾರವಾಡ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಆಕಾಂಕ್ಷಿಗಳಿಗೂ ದಿಗಿಲು ಮೂಡಿಸುವಂತೆ ಮಾಡಿದ್ದಾರೆ. ವಿನಯ ಕ್ಷೇತ್ರಕ್ಕೇ ಬರಲಾಗದು ಎಂದ ಮೇಲೆ ಕಾಂಗ್ರೆಸ್ ಅಭ್ಯರ್ಥಿಯಾಗಬೇಕೆಂದು ಅನೇಕರು ಹುಟ್ಟಿಕೊಂಡಿದ್ದರು. ಈ ಪೈಕಿ ಇಸ್ಮಾಯಿಲ್ ತಮಟಗಾರ ಪ್ರಮುಖರು. ವಿನಯ ಪತ್ನಿ ಶಿವಲೀಲಾ ಕ್ಷೇತ್ರ ಪ್ರದಕ್ಷಿಣೆ ಹಾಕುತ್ತಿರುವ ನಡುವೆ, ಇಸ್ಮಾಯಿಲ್ ಕೂಡ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಇಸ್ಮಾಯಿಲ್ ಬೆನ್ನಿಗೆ ಮಾಜಿ ಸಚಿವ ಸಂತೋಷ ಲಾಡ್ ನಿಂತಿದ್ದಾರೆ. ಇಂಥ ಸನ್ನಿವೇಶದ ಮಧ್ಯೆ ವಿನಯ ಕುಲಕರ್ಣಿ ನೀಡಿರುವ ಹೇಳಿಕೆಯಿಂದ ಸಹಜವಾಗಿ ಕಾಂಗ್ರೆಸ್ ಆಕಾಂಕ್ಷಿತರಿಗೆ ದಿಗಿಲು ಹುಟ್ಟಲಿದೆ. ಜತೆಗೆ ಬಿಜೆಪಿಗೂ ಪ್ರಬಲ ಎದುರಾಳಿ ಎದುರುಗೊಳ್ಳಲಿದ್ದಾರೆ ಎನ್ನುವ ಚಿಂತೆಯೂ ಶುರುವಾಗಲಿದೆ.
ಸದ್ಯಕ್ಕಂತೂ ವಿನಯ ನೀಡಿರುವ ಹೇಳಿಕೆ ಜಿಲ್ಲೆಯಲ್ಲಿ ಚರ್ಚೆಯ ವಸ್ತುವಾಗಿದೆ. ಆದರೆ, ವಿನಯ ಕುಲಕರ್ಣಿ ಅವರು ನಿಜಕ್ಕೂ ತಾವು ನೀಡಿರುವ ಹೇಳಿಕೆಗೆ ಬದ್ಧವಾಗಿರುವರೋ? ಅಥವಾ ಹೇಳಿಕೆಯಿಂದ ಏನೆಲ್ಲ ಬೆಳವಣಿಗೆಗಳು ನಡೆಯಬಹುದು ಎಂದು ನೋಡಲು ನೀಡಿದ ಒಂದು ಝುಲಕ್ ಆಗಿದೆಯೋ ? ಎನ್ನುವುದು ಪ್ರಶ್ನಾರ್ಥಕವಾಗಿದೆ.
ಆಪ್ತರ ಸಭೆ: ಶಿಗ್ಗಾಂವಿಯಲ್ಲಿ ಕಳೆದ ಎರಡು ದಿನಗಳಿಂದ ಬೀಡುಬಿಟ್ಟಿರುವ ವಿನಯ ಕುಲಕರ್ಣಿ ಆಪ್ತರ ಜತೆ ಸಭೆ ನಡೆಸಿದ್ದಾರೆ. ಮುಂದಿನ ರಾಜಕೀಯ ನಡೆಯ ಬಗ್ಗೆಯೇ ಚರ್ಚೆ ಮಾಡಿದ್ದಾರೆ. ಕೆಲವರು ಶಿಗ್ಗಾಂವಿಯಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿದರೆ, ಇನ್ನೂ ಕೆಲವರು ಧಾರವಾಡವೇ ಸೂಕ್ತ ಎಂದಿದ್ದಾರೆ. ಈ ಸಭೆಯ ಬಳಿಕ ಮಾಧ್ಯಮದ ಎದುರು ವಿನಯ ನಿರ್ಧಾರ ಪ್ರಕಟಿಸಿದ್ದಾರೆ.ಸದ್ಯ ಧಾರವಾಡ ಜಿಲ್ಲೆಗೆ ತೆರಳಲು ನ್ಯಾಯಾಲಯ ಅನುಮತಿ ನೀಡಿಲ್ಲ. ಮುಂದಿನ ದಿನದಲ್ಲಿ ಅನುಮತಿ ನೀಡಿದರೆ, ಖಂಡಿತ ಸ್ಪರ್ಧೆ ಮಾಡುತ್ತೇನೆ. ಜಿಲ್ಲೆಗೆ ಹೋಗದೆ ಹೊರಗೆ ಇದ್ದುಕೊಂಡು ಚುನಾವಣೆಗೆ ಸ್ಪರ್ಧಿಸಿದರೂ ಜನ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ.