ಕಲಬುರಗಿ: ಲೋಕಾಯುಕ್ತ ಬಲೆಗೆ ಬಿದ್ದ ಕಾನ್ಸ್ಟೇಬಲ್ ಮತ್ತು ಸಿಪಿಐ ಜೀಪ್ ಚಾಲಕನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಳು ದಂಧೆಕೋರನಿಂದ ಹಣಕ್ಕೆ ಬೇಡಿಕೆ ಇಟ್ಟ ಆಡಿಯೋವೊಂದು ವೈರಲ್ ಆಗಿದೆ.
ನಿನ್ನೆ (ಸೆ.23) ಮರಳು ಸಾಗಾಣಿಕೆ ಸಂಬಂಧ 30 ಸಾವಿರ ರೂಪಾಯಿ ಲಂಚ ಪಡೆಯುವಾಗ ಜೇವರ್ಗಿಯ ಕಾನ್ಸ್ಟೇಬಲ್ ಶಿವರಾಯ್ ಮತ್ತು ಸಿಪಿಐ ಜೀಪ್ ಚಾಲಕ ಅವ್ವಣ್ಣ ಲೋಕಾಯುಕ್ತ ಪೊಲೀಸ್ ಬಲೆ ಬಿದ್ದಿದ್ದರು.
ಇದೀಗ ಮರಳು ದಂಧೆಕೋರನಿಂದ ಹಣಕ್ಕೆ ಬೇಡಿಕೆ ಇಟ್ಟ ಆಡಿಯೋ ವೈರಲ್ ಆಗಿದ್ದು, ಅಕ್ರಮ ಮರಳು ಸಾಗಾಟದ ಹಿಂದೆ ಪೊಲೀಸರ ಕೈವಾಡ ಇರುವುದು ಬಟಾಬಯಲಾಗಿದೆ.
ಕಾನ್ಸಟೇಬಲ್ ಶಿವರಾಯ್ ಮತ್ತು ಜೀಪ್ ಚಾಲಕ ಅವ್ವಣ್ಣ, ಮರಳು ದಂಧೆಕೋರರ ಜೊತೆ ಮಾತಾನಾಡಿರುವ ಆಡಿಯೋ ವೈರಲ್ ಆಗಿದೆ. ಮರಳು ಸಾಗಾಣಿಕೆ ಮಾಡಬೇಕಾದರೆ ಜೇವರ್ಗಿ ಸಿಪಿಐ ಶಿವಪ್ರಸಾದ್ ಮಟ್ಟದ್ ಅವರಿಗೆ 32 ಸಾವಿರ ರೂ. ಕೊಡಬೇಕು ಅಂತಾ ಇಬ್ಬರು ಆಡಿಯೋದಲ್ಲಿ ಬೇಡಿಕೆ ಇಟ್ಟಿದ್ದಾರೆ.
ನೀವು ದುಡ್ಡು ಕೊಟ್ಟು ಮರಳು ಸಾಗಿಸಬೇಕು. ನಮ್ಮ ಬಳಿ ಪ್ರಿಪೇಯ್ಡ್ ಇದೆ. ಆದರೆ, ಯಾವಾಗಲು ಪೊಸ್ಟ್ ಪೇಯ್ಡ್ ಇರುವುದಿಲ್ಲ. ಎಲ್ಲರು ದುಡ್ಡು ಕೊಟ್ಟು ಮರಳು ಹೊಡೆಯುತ್ತಿದ್ದಾರೆ. ನೀವು ದುಡ್ಡು ಕೊಟ್ಟು ಮರಳು ಹೊಡೆದರೆ ಸಿಪಿಐ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ದುಡ್ಡು ಕೊಟ್ಟ ನಂತರ ನಮ್ಮ ಸಾಹೇಬರು ಗಾಡಿ ಹಿಡಿಯೋದಿಲ್ಲ. ಈ ಹಿಂದೆ ಕೇಸ್ ಆದಾಗ ನಿನ್ನನ್ನು ಉಳಿಸಿಲ್ವ. ನಿನಗೆ ಸಾಕಷ್ಟು ಸಹಾಯ ಮಾಡಿದ್ದೀವಿ. ಹೀಗಾಗಿ 32 ಸಾವಿರ ರೂ. ಕೊಡಬೇಕು ಎಂದು ಕಾನ್ಸ್ಟೇಬಲ್ ಇಬ್ಬರು ಮಾತನಾಡಿರುವುದು ಆಡಿಯೋದಲ್ಲಿದೆ.