ಕೆಲವೊಮ್ಮೆ ಮಹಿಳೆಯರ ಕೊರಳಲ್ಲಿನ ಆಭರಣ, ಮತ್ತೆ ಕೆಲವೊಮ್ಮೆ ಎಮ್ಮೆ ಹೀಗೆ ವಿಭಿನ್ನ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ ಐನಾತಿ ಕಳ್ಳರನ್ನು ಬಂಧಿಸುವಲ್ಲಿ ಹಾರೂಗೇರಿ ಪೊಲೀಸ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಗೂಗೇರಿ ಪೊಲೀಸರು ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಒಟ್ಟಾರೆ 4 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್ 9 ರಂದು ಹಾರೂಗೇರಿಯ ವಡಕಿ ತೋಟದಲ್ಲಿ ಬೈಕ್ ಮೇಲೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಹಾರೂಗೇರಿ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿತರು ಹಾರೂಗೇರಿ, ಮುಗಳಖೋಡ, ತೇರದಾಳ, ಗ್ರಾಮಗಳಲ್ಲಿ ಮಹಿಳೆಯ ಮೈಮೇಲಿನ ಆಭರಣ, ಹಾಗು ಹಾರೂಗೇರಿ ಹದ್ದೆಯಲ್ಲಿ 5 ಎಮ್ಮೆಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣ ಸೇರಿದಂತೆ ಇನ್ನೂ ನಾಲ್ಕು ಪ್ರಕರಣಗಳಲ್ಲಿ ಒಬ್ಬ ಬಾಲಕ ಸೇರಿದಂತೆ ಒಟ್ಟು 5 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿತರು ಕಳ್ಳತನ ಮಾಡಿದ ಎರಡು ಎಮ್ಮೆಗಳನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.
ಇನ್ನು ಕಳ್ಳತನ ಮಾಡಿದ್ದ ಬಂಗಾರ ಆಭರಣಗಳನ್ನು ರೂಮಿನಲ್ಲಿ ಬಚ್ಚಿಟ್ಟಿರುವುದಾಗಿ, ಹಾಗೂ ಮೂರು ಎಮ್ಮೆಗಳನ್ನು ತಮ್ಮ ಮನೆಯ ಮುಂದೆ ಹಾಜರು ಪಡಿಸುವಂತೆ ಒಪ್ಪಿಕೊಂಡಿರುತ್ತಾರೆ.