ಚಿಕ್ಕಬಳ್ಳಾಪುರ: ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವ ಸಲುವಾಗಿ ರೀಲ್ಸ್ ಮಾಡುವ ಒಂದೇ ಕಾರಣಕ್ಕೆ ಏನೇನೋ ಸಾಹಸಕ್ಕೆ ಮುಂದಾಗಿ ಅನಾಹುತ ಮಾಡಿಕೊಂಡ ಪ್ರಕರಣಗಳು ಬೇಕಾದಷ್ಟು ಇವೆ. ಇನ್ನು ಕೆಲವರು ಹಾಗೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದೂ ಇದೆ.
ಅಂಥದ್ದೇ ಒಂದು ಪ್ರಕರಣವಿದು.
ಇಲ್ಲೊಬ್ಬಳು ಯುವತಿ ರೀಲ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗಾನಹಳ್ಳಿ ಗ್ರಾಮದ ಬಳಿ ಈ ಅವಘಡ ನಡೆದಿದೆ. ಅಮೃತ (22) ಸಾವಿಗೀಡಾದ ಯುವತಿ. ಈಕೆ ಮೂಲತಃ ಶಿಡ್ಲಘಟ್ಟ ತಾಲೂಕಿನ ಗಾಜಿಲುವಾರುಪಲ್ಲಿ ಗ್ರಾಮದವಳು.
ಎಂಎ ಪದವೀಧರೆ ಆಗಿರುವ ಈಕೆ ಚಿಕ್ಕಬಳ್ಳಾಪುರದ ಜಂಬಿಗೆಮರದಹಳ್ಳಿಯ ನೆಂಟರ ಗೃಹಪ್ರವೇಶಕ್ಕಾಗಿ ಬಂದಿದ್ದಳು. ಅಲ್ಲಿ ಗಂಗಾನಹಳ್ಳಿ ಕೆರೆ ಕೋಡಿ ಹರಿಯುತ್ತಿರುವ ವಿಚಾರ ತಿಳಿದು ಮತ್ತೊಬ್ಬಳು ಯುವತಿ ಜೊತೆ ಅಲ್ಲಿಗೆ ತೆರಳಿದ್ದಳು. ಈ ವೇಳೆ ಜೊತೆಯಲ್ಲಿದ್ದ ಯುವತಿಗೆ ವಿಡಿಯೋ ಮಾಡಲು ಹೇಳಿ ಮೊಬೈಲ್ಫೋನ್ ನೀಡಿ ಕೆರೆಯ ಅಂಚಿನ ದಿಂಡಿನ ಮೇಲೆ ತೆರಳಿದ್ದಳು. ಆದರೆ ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾಗಿದ್ದಾಳೆ.
ಗುಡಿಬಂಡೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಕೆರೆಯ ನೀರಲ್ಲಿ ಅಮೃತ ಉರುಳಿದ ಘಟನೆಯನ್ನು ಗೆಳತಿ ಅಕ್ಷತಾ ತೋಟದಲ್ಲಿದ್ದ ಗ್ರಾಮಸ್ಥರಿಗೆ ತಿಳಿಸಿದ್ದು, ಅರ್ಧ ಗಂಟೆಯಲ್ಲೇ ಕೆರೆಯಿಂದ ಮೃತ ಅಮೃತಳನ್ನ ಸ್ಥಳೀಯರೇ ಮೇಲೆ ಎತ್ತಿದ್ದಾರೆ.
ಇನ್ನು ಇತ್ತೀಚೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಮೃತದೇಹದ ಮೇಲೆ ಅರ್ಧ ಗಂಟೆಯೊಳಗೆ ಉಪ್ಪು ಹಾಕಿ ಮಲಗಿಸಿದ್ರೆ ಬದುಕ್ತಾರೆ ಅನ್ನೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುಳ್ಳು ಸಂದೇಶದಂತೆ, ಪಾಪ ಬದುಕಿಸಬೇಕು ಅಂತ ಉಪ್ಪು ಸುರಿದು ಬದುಕಿಸಲು ಗ್ರಾಮಸ್ಥರು ಪ್ರಯತ್ನಿಸಿದ್ದೂ ನಡೆದಿದೆ.
Laxmi News 24×7